ನವದೆಹಲಿ: ಕೊರೊನಾ ವಿರುದ್ಧದ ಹೋರಾಟದೊಂದಿಗೆ ನಾವು ಅನ್ಲಾಕ್ 2.0 ಪ್ರವೇಶ ಪಡೆದುಕೊಂಡಿದ್ದೇವೆ. ಆತ್ಮ ನಿರ್ಭರ ಭಾರತಕ್ಕಾಗಿ ಹಗಲು-ರಾತ್ರಿ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದರು.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿನ ಕೊರೊನಾ ಸೋಂಕು ಪ್ರಮಾಣ ಹಾಗೂ ಸಾವಿನ ಸಂಖ್ಯೆ ನೋಡಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ದೇಶದಲ್ಲಿ ಅನ್ಲಾಕ್ 1.o ಜಾರಿಯಾದಾಗಿನಿಂದಲೂ ಸೋಂಕಿತ ಪ್ರಕರಣ ಹೆಚ್ಚಾಗಿದ್ದು, ಕಂಟೇನ್ಮೆಂಟ್ ಪ್ರದೇಶದಲ್ಲಿ ಜನರು ಹೆಚ್ಚು ಎಚ್ಚರದಿಂದಿರಬೇಕು ಎಂದು ಸೂಚನೆ ನೀಡಿದರು.
ಸೂಕ್ತ ಸಮಯದಲ್ಲಿ ಲಾಕ್ಡೌನ್ ಜಾರಿ ಮಾಡಿದ್ದರಿಂದ ಸಾವಿರಾರು ಜನರ ಪ್ರಾಣ ಉಳಿದಿದೆ. ಇಂತಹ ದೊಡ್ಡ ದೇಶದಲ್ಲಿ ಬಡವರು ಕೊರೊನಾ ಕಾರಣ ಉಪವಾಸ ಮಲಗಿಲ್ಲ. ದೇಶದಲ್ಲಿ ಲಾಕ್ಡೌನ್ ಜಾರಿಯಾಗುತ್ತಿದ್ದಂತೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಜಾರಿ ಮಾಡಲಾಗಿತ್ತು. ಇದರಿಂದ ದೇಶದ ಬಡವರಿಗೆ ಅನುಕೂಲವಾಗಿದೆ.
ಬಡವರು, ಅಗತ್ಯವಿರುವ ಜನರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಲಾಗಿದ್ದು ದೇಶದ ಎಲ್ಲರಿಗೂ ಒಂದೇ ರೇಷನ್ ಕಾರ್ಡ್ ಕೊಡುವ ಯೋಜನೆ ಶೀಘ್ರ ಜಾರಿಗೊಳ್ಳಲಿದೆ ಎಂದು ಮೋದಿ ತಿಳಿಸಿದರು. ದೇಶದ ಜನರಿಗಾಗಿ ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ. ನಮ್ಮೊಂದಿಗೆ ಸಹಕಾರ ನೀಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ಮನವಿ ಮಾಡಿದ ಅವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.