ಹೈದರಾಬಾದ್: ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಗುಣಪಡಿಸಲು ನಿಖರವಾದ ಲಸಿಕೆ ಅಥವಾ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಲೋಪಥಿ ಬಿಟ್ಟರೆ ಭಾರತದಲ್ಲಿ ಆಯುರ್ವೇದ ಔಷಧ ಪದ್ಧತಿ ಬಹಳ ಜನಪ್ರಿಯವಾಗಿದೆ. ಕೊರೊನಾ ಲಕ್ಷಣಗಳು, ಅದರ ನಿಯಂತ್ರಣ ಮುಂತಾದುವುಗಳ ಬಗ್ಗೆ ಆಯುರ್ವೇದ ಏನನ್ನುತ್ತದೆ ಎಂಬುದನ್ನು ಆಯುರ್ವೇದ ತಜ್ಞರು ಅಭ್ಯಾಸ ಮಾಡುತ್ತಿದ್ದಾರೆ. ಕೊರೊನಾ ಹಾಗೂ ಆಯುರ್ವೇದ ಚಿಕಿತ್ಸೆಯ ಕುರಿತು ಡಾ. ರಂಗನಾಯಕುಲು ಹಲವಾರು ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಸಾಂಕ್ರಾಮಿಕ ರೋಗಗಳ ಬಗ್ಗೆ ಬಹು ವಿಸ್ತೃತವಾಗಿ ಆಯುರ್ವೇದದಲ್ಲಿ ವಿವರಿಸಲಾಗಿದೆ. ರೋಗಿಯ ಸಂಪರ್ಕದಿಂದಾಗಿ ನಿರೋಗಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬುದನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ. ಕೊರೊನಾ ಲಕ್ಷಣಗಳ ಕುರಿತಾಗಿ ಹೇಳುವುದಾದರೆ, ಉಸಿರಾಟದ ಸಮಸ್ಯೆಯನ್ನು ಆಯುರ್ವೇದದಲ್ಲಿ 5 ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವು ಹೀಗಿವೆ: ಮಹಾಶ್ವಾಸ, ಊರ್ಧ್ವ ಶ್ವಾಸ, ಚಿನ್ನ ಶ್ವಾಸ, ತಮಕ ಶ್ವಾಸ ಹಾಗೂ ಕ್ಷುದ್ರ ಶ್ವಾಸ.
ಆಯುರ್ವೇದದ ಪ್ರಕಾರ ಕೊರೊನಾ ವೈರಸ್ ಕ್ಷುದ್ರ ಶ್ವಾಸ ಪ್ರಕಾರದಲ್ಲಿ ಬರುತ್ತದೆ. ಕ್ಷುದ್ರ ಅಥವಾ ಕಡಿಮೆ ಗಂಭೀರತೆಯ ಪ್ರಕಾರದಲ್ಲಿದ್ದರೂ ಕೊರೊನಾ ಪ್ರಾಣಹಾನಿಯನ್ನುಂಟು ಮಾಡಬಹುದು ಎಂದು ಹೇಳಲಾಗಿದೆ.
ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊರೊನಾ ಹರಡುತ್ತಿರುವುದು ಗಮನಕ್ಕೆ ಬಂದಲ್ಲಿ ನಿಗದಿತ ವೈದ್ಯಕೀಯ ಸಲಹೆಗಳನ್ನು ಪಾಲಿಸುತ್ತ ಈ ಕೆಳಗಿನ ಆಯುರ್ವೇದ ವಿಧಾನಗಳ ಪೈಕಿ ಒಂದು ಅಥವಾ ಎರಡು ವಿಧಾನಗಳನ್ನು ಪೂರಕವಾಗಿ ಅಳವಡಿಸಿಕೊಳ್ಳಬಹುದು.
ಆಯುರ್ವೇದದ ಕೆಲ ಜನಪ್ರಿಯ ಮನೆಮದ್ದು ವಿಧಾನಗಳು:
- ಒಂದು ಮುಷ್ಟಿ ಹಸಿ ಶುಂಠಿಯನ್ನು ಶುದ್ಧ ನೀರಿನಿಂದ ತೊಳೆದು, ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇವನ್ನು ಎರಡರಿಂದ ಮೂರು ನಿಮಿಷ ಮುಚ್ಚಿದ ಪಾತ್ರೆಯಲ್ಲಿ ಕುದಿಸಿ. ನೀರನ್ನು ಬಸಿಯಿರಿ ಹಾಗೂ ಶುಂಠಿಯ ತುಂಡುಗಳನ್ನು ಹಿಂಡಿ ಅದರಲ್ಲಿನ ರಸ ಸಂಪೂರ್ಣ ನೀರಿಗೆ ಸೇರುವಂತೆ ಮಾಡಿ. ಚಿಟಿಕೆ ಅರಿಶಿಣ ಹಾಗೂ ಒಂದಿಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ದಿನಕ್ಕೆರಡು ಬಾರಿ ಈ ಜ್ಯೂಸ್ ಸೇವಿಸಬಹುದು.
- ತೆಳುವಾದ ಶುಂಠಿಯ ತುಂಡನ್ನು ಬಾಯಲ್ಲಿಟ್ಟುಕೊಳ್ಳಿ. 5 ರಿಂದ 10 ನಿಮಿಷಗಳವರೆಗೆ ಇದನ್ನು ನಿಧಾನವಾಗಿ ಜಗಿಯಿರಿ.
- ಮೆಣಸು ಪುಡಿ (pepper powder) ಯೊಂದಿಗೆ ಬಾಳೆಹಣ್ಣು ಸೇವಿಸಿ.
- ಉಗುರು ಬೆಚ್ಚಗಿನ ಹಾಲಿಗೆ ಚಿಟಿಕೆ ಅರಿಶಿಣ ಸೇರಿಸಿ ದಿನಕ್ಕೊಮ್ಮೆ ಸೇವಿಸಿ.
- ಪ್ರತಿನಿತ್ಯ ಯಾವುದಾದರೂ ರೂಪದಲ್ಲಿ 5 ರಿಂದ 6 ಬೆಳ್ಳುಳ್ಳಿ ಎಸಳು ಸೇವಿಸಿ.
- ಬೆಳ್ಳುಳ್ಳಿ ರಸದೊಂದಿಗೆ ಬೆಲ್ಲ ಸೇರಿಸಿ ತಿನ್ನಿ.
- ಎರಡು ತುಳಸಿ ಎಲೆಗಳನ್ನು ತಿನ್ನಿ. ಇದರ ರಸ ತೆಗೆದು ಚಿಟಿಕೆ ಅರಿಶಿಣ ಸೇರಿಸಿ ಸೇವಿಸುವುದು ಇನ್ನೂ ಉತ್ತಮ.
- ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಪ್ರತಿದಿನ ಒಣದ್ರಾಕ್ಷಿ ಸೇವಿಸುವುದರಿಂದ ಕೆಮ್ಮು ಬರದಂತೆ ನಿಯಂತ್ರಿಸಬಹುದು.
- ಚಿಟಿಕೆ ದಾಲ್ಚಿನ್ನಿ ಪುಡಿ, ಮೆಣಸು ಹಾಗೂ ಒಣ ಶುಂಠಿಯ ಪುಡಿಯನ್ನು ಸೇರಿಸಿ ಇದರಿಂದ ಟೀ ಮಾಡಿಕೊಂಡು ಸೇವಿಸಿ.
- ತುಪ್ಪ, ವಿಟಮಿನ್ ಸಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಆಗಾಗ ಬೆಚ್ಚಗಿನ ನೀರು ಕುಡಿಯಿರಿ.