ಮುಂಬೈ:ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ದೊಂಬರಾಟಕ್ಕೆ ಇದೀಗ ರಾಷ್ಟ್ರಪತಿ ಆಳ್ವಿಕೆ ಮೂಲಕ ತೆರೆ ಎಳೆಯಲಾಗಿದ್ದು, ಮುಖ್ಯಮಂತ್ರಿ ಖುರ್ಚಿ ಮೇಲೆ ಕುಳಿತುಕೊಳ್ಳುವ ಕನಸು ಕಾಣುತ್ತಿದ್ದ ಶಿವಸೇನೆಗೆ ಮುಖಭಂಗವಾಗಿದೆ.
288 ಕ್ಷೇತ್ರಗಳ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಮತ್ತೊಂದು ಅವಧಿಗೆ ರಾಜ್ಯದಲ್ಲಿ ಬಿಜೆಪಿ + ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡುವುದು ಕನ್ಫರ್ಮ್ ಎಂದು ಹೇಳಲಾಗಿತ್ತು. ಆದರೆ, ಇದೇ ವೇಳೆ ಬಿಜೆಪಿ ಜತೆ ಗುದ್ದಾಟಕ್ಕಿಳಿದ ಶಿವಸೇನೆ 50: 50 ಸೂತ್ರದ ಮೊರೆ ಹೋಗಿತ್ತು. ಜತೆಗೆ 2.5 ವರ್ಷಗಳ ಕಾಲ ಸಿಎಂ ಸ್ಥಾನ ತನಗೆ ನೀಡಲೇಬೇಕು ಎಂದು ಪಟ್ಟು ಹಿಡಿದು ಕುಳಿತಿತ್ತು.
ಆದರೆ, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎರಡು ಪಕ್ಷಗಳ ನಡುವೆ ಅಸಮಾಧಾನ ಭುಗಿಲೆದ್ದಿತು. ಇದೇ ವೇಳೆ, ರಾಜ್ಯಪಾಲರು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದರು. ಆದರೆ ತನ್ನ ಬಳಿ 145 ಮ್ಯಾಜಿಕ್ ನಂಬರ್ ಇಲ್ಲದ ಕಾರಣ ಕಮಲ ಪಾಳಯ ಸರ್ಕಾರ ರಚನೆ ಮಾಡಲು ಮುಂದಾಗಲಿಲ್ಲ. ಇದಾದ ಬಳಿಕ ಎರಡನೇ ಅತಿದೊಡ್ಡ ಪಕ್ಷ ಶಿವಸೇನೆಗೆ ಗವರ್ನರ್ ಆಹ್ವಾನ ನೀಡಿದ್ದರು. ಈ ವೇಳೆ ಎನ್ಸಿಪಿ + ಕಾಂಗ್ರೆಸ್ ಜತೆ ಮಾತುಕತೆ ನಡೆಸಿದ ಉದ್ಧವ್ ಠಾಕ್ರೆ ಸರ್ಕಾರ ರಚನೆಗೆ 48ಗಂಟೆ ಹೆಚ್ಚುವರಿ ಸಮಯ ಕೇಳಿದ್ದರು. ಈ ಮನವಿಯನ್ನ ರಾಜ್ಯಪಾಲರು ತಳ್ಳಿ ಹಾಕಿ, ಮೂರನೇ ಅತಿದೊಡ್ಡಪಕ್ಷ ಎನ್ಸಿಪಿಗೆ ಆಹ್ವಾನ ನೀಡಿದ್ದರು. ಇಂದು ರಾತ್ರಿ ಎಂಟು ಗಂಟೆಯೊಳಗೆ ತಮಗಿರುವ ಬಹುಮತದ ಬಗ್ಗೆ ಪತ್ರ ನೀಡುವಂತೆ ಸೂಚಿಸಿದ್ದರು. ಆದರೆ ಎನ್ಸಿಪಿ- ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು. ಇನ್ನೊಂದು ಕಡೆ ರಾಜ್ಯಪಾಲರು ತಾವು ಕೊಟ್ಟ ಅವಧಿಗೆ ಮೊದಲೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ.
ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ರಾಷ್ಟ್ರಪತಿ ಆಳ್ವಿಕೆಗೆ ರಾಮನಾಥ್ ಕೋವಿಂದ್ ಸಹಿ ಸಹ ಮಾಡಿದ್ದರಿಂದ ಇದೀಗ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಧಿಕೃತವಾಗಿ ಶುರುವಾಗಿದೆ.