ನವದೆಹಲಿ: ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಏಳು ದೇಶಗಳ ರಾಯಭಾರಿಗಳು ಹಾಗೂ ಕಮಿಷನರ್ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಉತ್ತರ ಕೊರಿಯಾ, ಸೆನೆಗಲ್, ಟ್ರಿನಿಡಾಡ್ ಮತ್ತು ಟೊಬಾಗೊ, ಮಾರಿಷಸ್, ಆಸ್ಟ್ರೇಲಿಯಾ, ಕೋಟ್ ಡಿ ಐವೊಯಿರ್ ಮತ್ತು ರುವಾಂಡಾ ದೇಶದ ರಾಯಭಾರಿಗಳು ಪಾಲ್ಗೊಂಡಿದ್ದರು.
ರಾಷ್ಟ್ರಪತಿ ಭವನದ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಾಗಿದ್ದು, ವಿಶ್ವದೆಲ್ಲೆಡೆ ಪಸರಿಸಿರುವ ಮಾರಕ ಕೊರೊನಾ ವೈರಸ್ ಬಗ್ಗೆ ಚರ್ಚೆ ನಡೆಸಲಾಯಿತು.
ಇನ್ನು ಈ ಸಭೆಯಲ್ಲಿ ಕೊರೊನಾ ವೈರಸ್ನಿಂದಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ರೋಗವನ್ನು ನಿವಾರಿಸಲು ಮತ್ತು ಅದರ ಕಾರ್ಯಗಳನ್ನು ನವೀನ ರೀತಿಯಲ್ಲಿ ನಿರ್ವಹಿಸಲು ಡಿಜಿಟಲ್ ತಂತ್ರಜ್ಞಾನದ ಬಳಕೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಭಾರತವು ತನ್ನ ಜನರ ಮತ್ತು ಪ್ರಪಂಚದ ಒಳಿತಿಗಾಗಿ ಹಾಗೂ ಪ್ರಗತಿಗೆ ಡಿಜಿಟಲ್ ಮಾರ್ಗದ ಅಪಾರ ಸಾಧ್ಯತೆಗಳನ್ನು ಬಳಸಿಕೊಳ್ಳಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ರಾಯಭಾರಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಕೊರೊನಾ ಸಾಂಕ್ರಾಮಿಕ ರೋಗವು ಇಡೀ ಜಗತ್ತಿಗೆ ಹಾಗೂ ಜಾಗತಿಕ ಸಮುದಾಯಕ್ಕೆ ದೊಡ್ಡ ಸವಾಲನ್ನು ಒಡ್ಡಿದೆ, ಈ ಬಿಕ್ಕಟ್ಟಿನಿಂದ ನಾವು ಹೊರಗೆ ಬರುವಂತೆ ಶ್ರಮಿಸಬೇಕಿದೆ ಎಂದು ಇದೇ ವೇಳೆ, ಕರೆ ನೀಡಿದರು.
ಇದಲ್ಲದೇ, ಭಾರತ ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಹಾಗೂ ಈ ರೋಗಗಳ ವಿರುದ್ದ ಹೋರಾಡುವ ಇತರ ರಾಷ್ಟ್ರಗಳಿಗೆ ಬೆಂಬಲ ನೀಡುವಲ್ಲಿಯೂ ಸಹ ನಮ್ಮ ದೇಶ ಮುಂಚೂಣಿಯಲ್ಲಿದೆ ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಹೇಳಿದ್ದಾರೆ.
ಈ ಚರ್ಚೆಯಲ್ಲಿ ಭಾಗವಹಿಸಿದ ಇತರ ದೇಶದ ರಾಯಭಾರಿಗಳು, ಈ ಡಿಜಿಟಲ್ ವಿಡಿಯೋ ಕಾನ್ಫರೆನ್ಸ್ ಸಮಾರಂಭವನ್ನು ಶ್ಲಾಘಿಸಿದ್ದು, ನವದೆಹಲಿಯ ರಾಜತಾಂತ್ರಿಕ ಸಮುದಾಯದೊಂದಿಗೆ ಇಂದು ಭಾರತದೊಂದಿಗಿನ ವಿಶೇಷ ದಿನ ಎಂದು ರಾಯಭಾರಿಗಳು ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.