ನವದೆಹಲಿ: 'ಸಾಂಕ್ರಾಮಿಕ ರೋಗ-2020'ರ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ. ಇದೀಗ ಕಾಯ್ದೆಗೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆ ಕಾನೂನಾತ್ಮಕವಾಗಿ ಜಾರಿಗೆ ಬಂದಿದೆ.
ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರು ಹಾಗೂ ಇತರೆ ಆರೋಗ್ಯ ರಕ್ಷಣಾ ಕಾರ್ಯಕರ್ತರು ಸೇವೆಯಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದರೆ, ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರನ್ನು ಹೊಸ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಹಲ್ಲೆ ನಡೆಸಿರುವುದು ದೃಢಪಟ್ಟರೆ ಜಾಮೀನು ರಹಿತ ಪ್ರಕರಣ, 6 ತಿಂಗಳಿನಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ರಿಂದ 5 ಲಕ್ಷದವರಿಗೆ ದಂಡ ವಿಧಿಸಲಾಗುತ್ತದೆ. ಹಲ್ಲೆಗೆ ಪ್ರಚೋದನೆ ನೀಡಿರುವುದು ಖಾತ್ರಿಯಾದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ 3 ರಿಂದ 5 ವರ್ಷದವರಿಗೆ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಈ ಹೊಸ ಕಾಯ್ದೆಯಲ್ಲಿದೆ.
ದೇಶದ ಹಲವೆಡೆ ಕೋವಿಡ್19 ಸೋಂಕಿತರನ್ನು ಪತ್ತೆ ಹಚ್ಚಲು ಮುಂದಾಗಿದ್ದ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗಳಾಗಿದ್ದವು. ಇದರಿಂದ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಿನ್ನೆ ಸಚಿವ ಸಂಪುಟ ನಡೆಸಿ ಸಾಂಕ್ರಾಮಿಕ ರೋಗ ಕಾಯ್ದೆ-1897ಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿತ್ತು.
123 ವರ್ಷಗಳಷ್ಟು ಹಳೆಯದಾದ, 1897ರಲ್ಲಿ ಜಾರಿಗೊಳಿಸಲಾಗಿದ್ದ ಸಾಂಕ್ರಾಮಿಕ ರೋಗ ಕಾಯ್ದೆಗೆ ಇದೀಗ ಕಾನೂನಾತ್ಮಕವಾಗಿ ಹೊಸ ರೂಪ ನೀಡಲಾಗಿದೆ.