ನವದೆಹಲಿ:ಕನಿಷ್ಠ 10 ಮಂದಿಯನ್ನು ಬಲಿ ಪಡೆದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಎಂ ಮೋದಿ, "ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ ವಿಚಾರ ಕೇಳಿ ನೋವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಾ, ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.
"ಭಿವಂಡಿಯಲ್ಲಿ ಕಟ್ಟಡ ಕುಸಿತ ಘಟನೆಯಲ್ಲಿ ಜನರು ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿಯಾಗಿದೆ. ಈ ನೋವಿನ ಸಂದರ್ಭದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರಿಗೆ ಮುಡಿಪು. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತೇನೆ. ಸ್ಥಳೀಯ ಅಧಿಕಾರಿಗಳು ಸಹ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗಿನ ಜಾವ 3:20ರ ಸುಮಾರಿಗೆ ಕಟ್ಟಡ ಕುಸಿದಿದ್ದು, ಅವಶೇಷಗಳಡಿಯಲ್ಲಿ 20ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಪೊಲೀಸರು, ಸ್ಥಳೀಯ ಅಧಿಕಾರಿಗಳು ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.