ನವದೆಹಲಿ: ಪ್ರಧಾನಿ ಅವರ ಸಲಹೆಯಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.
ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದ ಉಸ್ತುವಾರಿಯನ್ನು ಕ್ಯಾಬಿನೆಟ್ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ವಹಿಸಲು ರಾಷ್ಟ್ರಪತಿಗಳು ನಿರ್ದೇಶಿಸಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ನರೇಂದ್ರ ಮೋದಿ ಸರ್ಕಾರದಲ್ಲಿದ್ದ ಅಕಾಲಿ ದಳದ ಏಕೈಕ ಸಚಿವೆ ಗುರುವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ಹರ್ಸಿಮ್ರತ್ ಕೌರ್ ಬಾದಲ್, ‘ಮೇ ತಿಂಗಳಲ್ಲಿ ಈ ಸುಗ್ರೀವಾಜ್ಞೆಗಳನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಹಲವಾರು ಸಮಸ್ಯೆಗಳನ್ನು ಎತ್ತಲಾಯಿತು. ನಾನು ಆಹಾರ ಸಂಸ್ಕರಣಾ ಉದ್ಯಮವನ್ನು ನೋಡಿಕೊಳ್ಳುತ್ತಿದ್ದೆ ಮತ್ತು ಈ ಸುಗ್ರೀವಾಜ್ಞೆಗಳು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಅನುಕೂಲಕರವಾಗಿವೆ. ಆದರೆ ಎಪಿಎಂಸಿ ಮತ್ತು ರೈತರ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಅರಿತುಕೊಂಡೆ’ ಎಂದು ಹೇಳಿದ್ದಾರೆ.