ಕೊವಿಡ್-19 ಸಾಂಕ್ರಾಮಿಕ ರೋಗದ ಸೋಂಕಿಗೆ ಒಳಗಾಗುವ ಗರ್ಭಿಣಿಯರು ಗರ್ಭಪಾತ, ಕಾಲಮುನ್ನ ಹೆರಿಗೆ ಹಾಗೂ ಭ್ರೂಣ ಬೆಳವಣಿಗೆಯ ಕುಂಠಿತ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂಬ ಕಳವಳವನ್ನು ಅಮೆರಿಕನ್ ಕಾಲೇಜ್ ಆಫ್ ಅಬ್ ಸ್ಟ್ರೆಟ್ರಿಸಿಯನ್ಸ್ ಅಂಡ್ ಗೈನೆಕಾಲಜಿಸ್ಟ್ಸ್ ಮತ್ತು ಯು.ಕೆಯ ನ್ಯಾಷನಲ್ ಹೆಲ್ತ್ ಸರ್ವೀಸ್ ಸಂಸ್ಥೆಗಳ ತಜ್ಞರು ವ್ಯಕ್ತಪಡಿಸಿದ್ದಾರೆ.
"ತಮಗೆ ಸೋಂಕು ತಗುಲಿರಬಹುದು ಎಂದು ಭಾವಿಸುವ ಗರ್ಭಿಣಿಯರು ಕೂಡಲೇ ಪ್ರಸೂತಿ ತಜ್ಞರನ್ನು ಸಂಪರ್ಕಿಸಿ ತಮ್ಮ ಸಂದೇಹವನ್ನು ತಿಳಿಸಬೇಕು. ರೋಗಲಕ್ಷಣಗಳು ತೀವ್ರವಾಗಿದ್ದ ಪಕ್ಷದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು" ಎನ್ನುತ್ತಾರೆ ಪ್ರಸೂತಿ ತಜ್ಞೆ ಹಾಗೂ ಸ್ರ್ತೀರೋಗ ತಜ್ಞರಾಗಿರುವ, ಜಸ್ಟಿನ್ ಬ್ರಾಂಡ್ಡ್. ಇವರು ರುಡ್ಗರ್ಸ್ ರಾಬರ್ಟ್ ವುಡ್ ಜಾನ್ಸನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಹಾಗೂ ಸ್ರ್ತೀರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಹೆಚ್ಚಿನ ವೈದ್ಯಕೀಯ ವರದಿಗಳ ಪ್ರಕಾರ ಕೊರೊನಾವೈರಸ್ ಸೋಂಕಿತ ತಾಯಿಯಿಂದ ಭ್ರೂಣ ರೂಪದ ಶಿಶುವಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೆ ,ಕೆಲವು ಸಂಶೋಧನೆಗಳು ತಿಳಿಸಿರುವ ಪ್ರಕಾರ ಕೆಲವು ನವಜಾತ ಶಿಶುಗಳಲ್ಲಿ ಕಂಡುಬಂದಿರುವ ಆಂಟಿಬಾಡಿಗಳು ಶಿಶು ಕೊರೊನಾವೈರಸ್ ಸೋಂಕಿಗೆ ಗರ್ಭದಲ್ಲಿದ್ದಾಗಲೇ ಒಳಗಾಗಿದೆ ಎಂಬುದನ್ನು ತಿಳಿಸುತ್ತದೆ.
"ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ತುವಿದೆ. ಖಚಿತವಾಗಿ ಹೇಳಲು ಹೆಚ್ಚಿನ ದತ್ತಾಂಶದ ಅಗತ್ಯವಿದೆ" ಎನ್ನುತ್ತಾರೆ ಬ್ರಾಂಡ್ಟ್. ಸೋಂಕಿಗೆ ಒಳಗಾಗುವ ಸಂಭಾವ್ಯತೆಯನ್ನು ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ಗರ್ಭಿಣಿ ಮಹಿಳೆಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮನೆಯಲ್ಲೇ ಇದ್ದು ಜನರು ಗುಂಪುಗೂಡುವ ಸ್ಥಳಗಳಿಗೆ ಹೋಗಲೇಕೂಡದು. ಒಂದೊಮ್ಮೆ ಮನೆಯಿಂದ ಹೊರಗೆ ಹೋಗಲೇಬೇಕಾಗಿ ಬಂದರೆ ಆಗಾಗ ಕೈ ತೊಳೆದುಕೊಳ್ಳಬೇಕು. ಕೈಯಿಂದ ತಮ್ಮ ಮುಖ ಮುಟ್ಟಿಕೊಳ್ಳಬಾರದು. ಯಾರಾದರೂ ಕಾಯಿಲೆಯ ವ್ಯಕ್ತಿಗಳಿದ್ದರೆ ಅವರಿಂದ ಕನಿಷ್ಠ ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು.
ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಕೆಲವು ತಿಂಗಳುಗಳ ಕಾಲ ಮನೆಯಲ್ಲೇ ಇರಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಆಹಾರ ಪದಾರ್ಥಗಳು, ಟೈಲೆನಾಲ್, ಥರ್ಮಾಮೀಟರ್ ಮತ್ತು ಮನೆಬಳಕೆಯ ವಸ್ತುಗಳಾದ ಸೋಪು, ಟಾಯ್ಲೆಟ್ ಪೇಪರ್ ಹಾಗೂ ಪಾತ್ರೆ, ಬಟ್ಟೆ ತೊಳೆಯುವ ಡಿಟರ್ಜೆಂಟ್ ಇತ್ಯಾದಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ಮತ್ತೊಂದು ಕಡೆಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಜಗತ್ತಿನಾದ್ಯಂತ ಒಂದು ಮಿಲಿಯನ್ ದಾಟಿದೆ. ಅಮೆರಿಕದಲ್ಲಿ ಸಾವಿಗೀಡಾದವರ ಸಂಖ್ಯೆ 6200 ನ್ನು ದಾಟಿದೆ. ಟ್ರಂಪ್ ಸರ್ಕಾರವು ಹೊಸ ನಿರ್ದೇಶನಗಳನ್ನು ಹೊರಡಿಸಿ ಅಮೆರಿಕದ ಪ್ರಜೆಗಳಿಗೆ ಮುಖಗವಸುಗಳನ್ನು ಧರಿಸಲು ತಿಳಿಸಿದೆ.