ಜಾಲೋನ್(ಉತ್ತರ ಪ್ರದೇಶ) : ಗರ್ಭಿಣಿ ಮಹಿಳೆ ಹಾಗೂ ಅವಳ ಪತಿ ಇಬ್ಬರೂ 200 ಕಿ.ಮೀ ನಡೆದು ತಮ್ಮ ಊರು ಸೇರಿಕೊಂಡ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಳೆದ ಐದು ವರ್ಷಗಳಿಂದ ಈ ದಂಪತಿ ನೋಯ್ಡಾದಲ್ಲಿ ದಿನಗೂಲಿ ಕಟ್ಟಡ ಕಾಮಗಾರಿ ನೌಕರಿ ಮಾಡುತ್ತಿದ್ದರು. ಆದರೆ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಇಬ್ಬರೂ ನೋಯ್ಡಾದಿಂದ 200 ಕಿಮೀ ನಡೆಯುತ್ತ ಉತ್ತರ ಪ್ರದೇಶದ ರಾಥ ಪ್ರದೇಶದಲ್ಲಿರುವ ಔಂಟಾ ಗ್ರಾಮ ಸೇರಿಕೊಂಡಿದ್ದಾರೆ.
28 ವರ್ಷದ ಅಂಜು ಎಂಬ ಈ ಮಹಿಳೆ 8 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಎರಡು ದಿನ, ಎರಡು ರಾತ್ರಿ ನಡೆದಿದ್ದಾಳೆ. ನಡೆದುಕೊಂಡೇ ಗ್ರಾಮಕ್ಕೆ ಬಂದ ಪತ್ನಿ ಅಂಜು ಹಾಗೂ ಪತಿ ಅಶೋಕ ಇಬ್ಬರೂ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಥರ್ಮಲ್ ಸ್ಕ್ರೀನಿಂಗ್ ನಡೆಸಿದ ವೈದ್ಯರು ದಂಪತಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ದಂಪತಿಯನ್ನು 14 ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಭೂರಹಿತ ರೈತನಾಗಿದ್ದ ಅಶೋಕ ಹೊಟ್ಟೆಪಾಡಿಗಾಗಿ ಪತ್ನಿಯೊಂದಿಗೆ ನೋಯ್ಡಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ದೇಶಾದ್ಯಂತ ಲಾಕ್ಡೌನ್ ಘೋಷಣೆಯಾದ ನಂತರ ಅನಿವಾರ್ಯವಾಗಿ ನಡೆದೇ ಹಳ್ಳಿಗೆ ಬಂದಿದ್ದಾರೆ ಅಶೋಕ ಮತ್ತು ಅಂಜು.
ತಮ್ಮ ಕಷ್ಟಕರವಾದ ಕಾಲ್ನಡಿಗೆ ಪ್ರಯಾಣದ ಬಗ್ಗೆ ಮಾತನಾಡಿದ ಅಶೋಕ, "ನಾವು ಇದಕ್ಕೂ ಮೊದಲೇ ನೋಯ್ಡಾದಿಂದ ಹೊರಡಬೇಕಿತ್ತು. ಆದರೆ ಕೆಲಸಕ್ಕಿಟ್ಟುಕೊಂಡಿದ್ದ ಗುತ್ತಿಗೆದಾರ ಬಾಕಿ ಸಂಬಳ ನೀಡಲು ತಡ ಮಾಡಿದ. ಸಂಬಳ ಸಿಕ್ಕ ತಕ್ಷಣ ನಾವು ಒಂದಿಷ್ಟು ರೊಟ್ಟಿ ಹಾಗೂ ಪಲ್ಯ ಕಟ್ಟಿಕೊಂಡು ನಮ್ಮೂರಿನತ್ತ ನಡೆಯಲಾರಂಭಿಸಿದೆವು. ಕೊನೆಗೂ ಹೇಗೋ ಊರಿಗೆ ಬಂದಿದ್ದು ನಮಗೆ ನೆಮ್ಮದಿ ತರಿಸಿದೆ" ಎಂದು ಹೇಳಿದ್ದಾನೆ.