ಹೈದರಾಬಾದ್:ಭಾರತದಲ್ಲಿ ಪ್ರತಿ ತಿಂಗಳು ಅಂದಾಜು 2 ಲಕ್ಷ ಮಹಿಳೆಯರು ಗರ್ಭಿಣಿಯರಾಗುತ್ತಾರೆ. ಸದ್ಯ ಈ ಸಾಂಕ್ರಾಮಿಕವು ಕೆಲವೇ ತಿಂಗಳುಗಳಷ್ಟು ಹಳೆಯದಾಗಿದ್ದು, ಅದು ತೀವ್ರಗೊಂಡಿರುವ ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಹೆರಿಗೆಯಾಗಿರುವಂತಹ ಬಹುತೇಕ ತಾಯಂದಿರು ಆಗ ತಮ್ಮ ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿದ್ದರು.
ಈ ಅವಧಿಯಲ್ಲಿ, ಇನ್ನೂ ಹುಟ್ಟಲಿರುವ ಅವರ ಮಗುವಿಗೆ ತಗಲಬಹುದಾದ ಅಪಾಯ ಕನಿಷ್ಠವಾಗಿದೆ. ಒಂದು ವೇಳೆ ಅವರು ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಅವಧಿಯಲ್ಲಿದ್ದರೆ, ಹುಟ್ಟುವ ಮಕ್ಕಳಲ್ಲಿ ದೈಹಿಕ ಊನತೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಏಕೆಂದರೆ, ಭ್ರೂಣದ ಬಹುತೇಕ ಮಹತ್ವದ ಅಂಗಾಂಗಳು ಗರ್ಭದಲ್ಲಿ ರೂಪುಗೊಳ್ಳುವುದು ಇದೇ ಅವಧಿಯಲ್ಲಿ.
ಕೋವಿಡ್-19 ಸಾಂಕ್ರಾಮಿಕ ರೋಗ ದಾಳಿಯಿಟ್ಟಾಗಿನಿಂದ ಇದುವರೆಗೆ ಈ ರೀತಿಯ ದೈಹಿಕ ಊನತೆ ಅಥವಾ ನಿಶ್ಚಲ ಮಗುವಿನ ಜನನದ ಯಾವ ಘಟನೆಗಳೂ ವರದಿಯಾಗಿಲ್ಲ. ಚೀನಾದಿಂದ ಬರುತ್ತಿರುವ ವರದಿಗಳ ಪ್ರಕಾರ ಈ ಅವಧಿಯಲ್ಲಿ ಜನಿಸಿದ ಮಕ್ಕಳು ಝಿಕಾ ಅಥವಾ ರುಬೆಲ್ಲಾ ವೈರಸ್‌ಗಳ ಸೋಂಕಿನಿಂದ ಉಂಟಾಗುವಂತಹ ಯಾವ ಪ್ರಮುಖ ದೈಹಿಕ ಊನತೆಗಳನ್ನೂ ಹೊಂದಿಲ್ಲ.
ಸೋಂಕಿಗೆ ಒಳಗಾದ ತಾಯಿಯಿಂದ ಜನಿಸುವ ಮಕ್ಕಳು ದೈಹಿಕ ಊನತೆ ಹೊಂದುವಲ್ಲಿ ಝಿಕಾ ವೈರಸ್ಸೇ ಪ್ರಮುಖ ಕಾರಣ ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ, ಝಿಕಾದಂತೆ ಕೊರೊನಾ ಸೋಂಕು ಕೂಡಾ ತಾಯಂದಿರಿಂದ ಮಕ್ಕಳಿಗೆ ಹರಡುತ್ತದೆ ಎಂಬುದು ಅಂಗಾಂಶ ದ್ರವ ಅಥವಾ ಎದೆಹಾಲಿನಲ್ಲಿ ಕಂಡುಬಂದಿರುವ ಪ್ರಕರಣಗಳು ಇದುವರೆಗೆ ವರದಿಯಾಗಿಲ್ಲ.
ಚೀನಾದ ವುಹಾನ್‌ನಲ್ಲಿ ನಡೆದ ಅಧ್ಯಯನದಲ್ಲಿ 33 ತಾಯಂದಿರ ಪೈಕಿ ಮೂರು ಮಕ್ಕಳು ಜನನದ ನಂತರ ಕೊರೊನಾ ಸೋಂಕು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಎರಡು ಮಕ್ಕಳು ಯಾವುದೇ ಚಿಕಿತ್ಸೆಯಿಲ್ಲದೇ ಜನಿಸಿದ ಆರು ದಿನಗಳ ನಂತರ ಸೋಂಕುಮುಕ್ತವಾಗಿವೆ. ಅವಧಿಪೂರ್ವ ಜನನವಾಗಿದ್ದ ಮೂರನೇ ಮಗು ಆಂಟಿಬಯಾಟಿಕ್‌ಗಳ ಅವಶ್ಯಕತೆ ಹೊಂದಿದ್ದು, ಬಲು ಬೇಗ ಗುಣಮುಖವಾಗಿದೆ.
ಇದರಿಂದ ಸಾಬೀತಾಗುವುದೇನೆಂದರೆ, ಕೊರೊನಾ ವೈರಸ್ ತಾಯಿಯಿಂದ ಗರ್ಭದಲ್ಲಿರುವ ಮಗುವಿಗೆ ಹರಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ತಾಯಿಗಾಗಲೀ ನವಜಾತ ಶಿಶುವಿಗಾಗಲಿ ವೈರಸ್‌ನಿಂದ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇದುವರೆಗೆ ಕಂಡುಬಂದಿಲ್ಲ. ಆದರೆ, ಕೊರೊನಾ ವೈರಸ್ ಸೋಂಕು ಭ್ರೂಣದ ಮೇಲೆ ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ ಎಂಬುದನ್ನು ತೋರಿಸಲು ವಿವಿಧ ದೇಶಗಳಲ್ಲಿ ಸುದೀರ್ಘ ಮತ್ತು ದೊಡ್ಡ ಪ್ರಮಾಣದ ಅಧ್ಯಯನಗಳು ನಡೆಯಬೇಕಾದ ಅವಶ್ಯಕತೆಯಿದೆ. ಇಂತಹ ಅಧ್ಯಯನ ಇಲ್ಲದಿರುವಾಗ ಗರ್ಭಿಣಿ ತಾಯಿ ಏನು ಮಾಡಬೇಕು? ದಿಗ್ಬಂಧನದಿಂದಾಗಿ, ಒಂಬತ್ತು ತಿಂಗಳ ನಂತರ ಜಗತ್ತು ಜನನ ಕ್ರಾಂತಿಯನ್ನು ಕಾಣುವ ಸಂಭವವಿದೆ. ಕೊರೊನಾ ಸೋಂಕು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಬಹಳಷ್ಟು ಹೆಣ್ಣುಮಕ್ಕಳು ಅವಧಿಪೂರ್ವ ಗರ್ಭಿಣಿಯರಾಗುವ ಸಾಧ್ಯತೆಯೂ ಇದೆ.
ಸದ್ಯಕ್ಕಂತೂ ಕೋವಿಡ್-19 ಸೋಂಕು ಕಂಡುಬಂದಿರುವ ಗರ್ಭಿಣಿ ತಾಯಂದಿರ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆಯಿದೆ. ದಾಖಲೆಗೊಂಡಿರುವ ಒಂದೇ ಒಂದು ಪ್ರಕರಣ ದೆಹಲಿಯಿಂದ ವರದಿಯಾಗಿದ್ದು, ಸೋಂಕು ದೃಢೀಕರಣ ಹೊಂದಿರುವ ತಾಯಿಯು ಆರೋಗ್ಯವಂತ ಶಿಶುವಿಗೆ ಜನ್ಮವಿತ್ತಿದ್ದಾಳೆ. ಆದರೆ, ಕೊರೊನಾ ಸೋಂಕು ದೃಢಪಟ್ಟ ಶೇಕಡಾ ೮೦ರಷ್ಟು ಪ್ರಕರಣಗಳು ಸಾಧಾರಣದಿಂದ ಮಧ್ಯಮ ಹಂತದವಾಗಿದ್ದು, ಬಹುಶಃ ಪರೀಕ್ಷೆಗೆ ಒಳಪಟ್ಟಿರುವುದಿಲ್ಲ. ಆದ್ದರಿಂದ ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಡ್ಡಿಕೊಂಡಿರುವ ಸಾಧ್ಯತೆಗಳು ಕಡಿಮೆಯೇನೂ ಅಗಿರುವುದಿಲ್ಲ.
ಆದ್ದರಿಂದ ಗರ್ಭಿಣಿ ತಾಯಂದಿರನ್ನು ನಿಯಮಿತವಾಗಿ ಆರೋಗ್ಯ ಪರೀಕ್ಷೆಗೆ ಒಳಪಡಿಸಬೇಕು. ಆದರೆ, ದಿಗ್ಬಂಧನ ಘೋಷಣೆಯಿಂದಾಗಿ ಇದನ್ನು ಸಾಧಿಸುವುದು ಕಷ್ಟವಾಗಿದ್ದು, ರೂಢಿಗತ ಗರ್ಭಿಣಿ ಪರೀಕ್ಷೆಗಳನ್ನು ರದ್ದುಪಡಿಸಬೇಕಾಗಿ ಬರಬಹುದು. ಮಹಿಳೆಯರಿಗೆ ಕೂಡಾ ನಿಯಮಿತ ಪರೀಕ್ಷೆಗೆ ಹೋಗಲು ಸಾಧ್ಯವಾಗಲಿಕ್ಕಿಲ್ಲ. ಆದ್ದರಿಂದ ರೋಗ ಲಕ್ಷಣಗಳಾದ ಕೆಮ್ಮು, ಜ್ವರ ಮತ್ತು ಉಬ್ಬಿದ ಗಂಟಲು ಸಮಸ್ಯೆ ಕಂಡು ಬಂದರೆ, ಅವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ವೈದ್ಯರು ನಿರೀಕ್ಷಿಸುವಂತಹ ಚಿಕಿತ್ಸೆಯು ಕೋವಿಡ್ ದೃಢೀಕೃತ ತಾಯಂದಿರಿಗೆ ಸಿಗುವಂತೆ ನೋಡಿಕೊಳ್ಳಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವುದೇ ತಾರತಮ್ಯ ಮಾಡಬಾರದು. ಗರ್ಭಾವಸ್ಥೆಯ ಪ್ರಾರಂಭಿಕ ಹಂತಗಳಲ್ಲಿರುವ ತಾಯಂದಿರಂತೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ, ಈ ಅವಧಿಯಲ್ಲಿ ಕೊರೊನಾ ವೈರಸ್ ಸೋಂಕಿನ ವ್ಯತಿರಿಕ್ತ ಪರಿಣಾಮಗಳು ಏನಿವೆಯೋ ಎಂಬುದು ನಮಗಿನ್ನೂ ಗೊತ್ತಿಲ್ಲ. ಮಾಸ್ಕ್ ಧರಿಸುವುದು, ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುವುದು ಹಾಗೂ ಫ್ಲು ಜ್ವರದಂತಹ ಲಕ್ಷಣಗಳನ್ನು ಹೊಂದಿರುವ ಜನರ ಸಂಪರ್ಕದಿಂದ ದೂರವಿರುವುದನ್ನು ಕಡ್ಡಾಯವಾಗಿ ಪಾಲಿಸಬೇಕು.