ಪ್ರತಾಪ್ ಗಢ (ಉತ್ತರಪ್ರದೇಶ): ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಯಾರಿಗೆ ಯಾವಾಗ ಬೇಕಾದ್ರೂ ಲವ್ ಆಗಬಹುದು. ಮದುವೆಯೂ ಆಗಬಹುದು. ಅದೇ ರೀತಿ ಉತ್ತರಪ್ರದೇಶದ ಪ್ರತಾಪ್ಗಢದಲ್ಲಿ ಡಿಫರೆಂಟ್ ಲವ್ ಮ್ಯಾರೇಜ್ ನಡೆದಿದೆ.
75 ವರ್ಷದ ವೃದ್ಧ ಹಾಗೂ 42 ವರ್ಷದ ಮಹಿಳೆ ಪ್ರೀತಿಸಿ ಮದುವೆಯಾಗಿರುವ ಅಪರೂಪದ ಘಟನೆಗೆ ಪ್ರತಾಪ್ಗಢ ಜಿಲ್ಲೆ ಸಾಕ್ಷಿಯಾಗಿದೆ. ಇಬ್ಬರೂ ವಾದ್ಯಗಳ ಸಮೇತರಾಗಿ ಫತನ್ಪುರದ ಖುರ್ದ್ ಗ್ರಾಮಕ್ಕೆ ಆಗಮಿಸಿದಾಗ ಸ್ಥಳೀಯ ಜನತೆ ನವಜೋಡಿಯನ್ನ ನೋಡಲು ಮುಗಿಬಿದ್ದು, ಅವರನ್ನು ಆದರದಿಂದ ಸ್ವಾಗತಿಸಿದ್ದಾರೆ.
42 ವರ್ಷದ ಮಹಿಳೆ ಕೈ ಹಿಡಿದ 75 ರ ವೃದ್ಧ ಹಲವು ವರ್ಷಗಳಿಂದ 42 ವರ್ಷದ ರಾಮ್ರತಿ ಹಾಗೂ 75 ವರ್ಷದ ಅವಧ್ ನಾರಾಯಣ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನ ಮಕ್ಕಳ ಮುಂದೆ ಪ್ರಸ್ತಾಪಿಸಿದಾಗ ಇಬ್ಬರ ಮನೆಯವರೂ ಒಪ್ಪಿ ಮದುವೆ ಮಾಡಿದರು. ಅಕ್ಟೋಬರ್ 26 ರಂದು ವಧು-ವರರ ಮಕ್ಕಳ ಸಮ್ಮುಖದಲ್ಲೇ ಶಾಸ್ತ್ರ, ಸಂಪ್ರದಾಯಗಳೊಂದಿಗೆ ಹಸೆಮಣೆ ಏರಿದರು.
ಇಳಿವಯಸ್ಸಿನಲ್ಲಾದ ಈ ಮದುವೆಗೆ ಅನೇಕರು ಲೇವಡಿ ಮಾಡಿದರು. ಆದರೆ, ನಮ್ಮ ಪ್ರೀತಿ ವಯಸ್ಸು, ಜಾತಿ ಎಲ್ಲವನ್ನೂ ಮೀರಿದ್ದು ಎಂದು ನವದಂಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.