ಕರ್ನಾಟಕ

karnataka

ETV Bharat / bharat

ಭಾರತ 'ರತ್ನ' ಮುಖರ್ಜಿ ಜೀವನ ಪಯಣ: ಮಿರಾತಿಯಿಂದ ರಾಷ್ಟ್ರಪತಿ ಭವನದವರೆಗೆ 'ದಾ' ಹಾದಿ..! - Pranab Mukharji passed away

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ವತಂತ್ರ ಭಾರತದ ರಾಜಕಾರಣದ ಬೆಳವಣಿಗೆಯನ್ನು ಕಂಡವರು. ಹಲವಾರು ಮಹತ್ತರ ರಾಜಕೀಯ ಹುದ್ದೆಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದವರು. ಅವರ ಜೀವನದ ಹಾದಿಯ ಒಂದು ವಿಶೇಷ ವರದಿ ಇಲ್ಲಿದೆ.

Pranab Mukherjee life story
ಭಾರತ 'ರತ್ನ' ಪ್ರಣಬ್​ ಮುಖರ್ಜಿ ಜೀವನ ಪಯಣ

By

Published : Aug 31, 2020, 6:37 PM IST

ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ದೇಶ ಕಂಡ ಅಪರೂಪದ ರಾಜಕಾರಣಿ. ಸುಮಾರು 5 ದಶಕಗಳ ಅವರ ಸುದೀರ್ಘ ರಾಜಕೀಯ ಪಯಣದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಪ್ರಣಬ್ ಸ್ವತಂತ್ರ ಭಾರತದ ರಾಜಕಾರಣದ ಬೆಳವಣಿಗೆಯನ್ನು ಕಂಡ ರಾಜಕಾರಣಿ ಹಾಗೂ ಹಲವಾರು ಮಹತ್ತರ ರಾಜಕೀಯ ಹುದ್ದೆಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ ಮುತ್ಸದ್ದಿ.

ಪ್ರಣಬ್​ ಮುಖರ್ಜಿ 1935 ರ ಡಿಸೆಂಬರ್​ 11 ರಂದು ಪಶ್ಚಿಮ ಬಂಗಾಳದ ಮಿರಾತಿ ಎಂಬಲ್ಲಿ ಜನಿಸಿದರು. ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಬಿ.ಎ.ಎಂ.ಎ. ಎಲ್​ಎಲ್​ಬಿ ಪದವಿ ಪಡೆದು ಕಾಲೇಜು ಉಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಮೊದಲ ದರ್ಜೆ ಗುಮಾಸ್ತರಾಗಿ ಕೆಲಸ ನಿರ್ವಹಿಸಿದ ಅವರು, ಪತ್ರಕರ್ತರಾಗಿಯೂ ಅನುಭವ ಪಡೆದವರು.

ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಖಾತೆ, ವಿದೇಶಾಂಗ ಖಾತೆ ಸೇರಿದಂತೆ ವಿವಿಧ ಹುದ್ದೆ ಅಲಂಕರಿಸಿದ್ದ ಪ್ರಣಬ್​ ಮುಖರ್ಜಿ, 2012 ರಿಂದ 2017ರ ವೆರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಮೊದಲು 2009 ರಿಂದ 2012ರ ವರೆಗೆ ಮನಮೋಹನ್​ ಸಿಂಗ್​ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.

1969 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬೆಂಬಲದಿಂದ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು, ಪ್ರಣಬ್ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಳಿಕ 1973ರಲ್ಲಿ ಇಂದಿರಾ ಗಾಂಧಿ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 1982-84ರಲ್ಲಿ ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಾಗೂ 1980 ರಿಂದ 1985 ರವರೆಗೆ ರಾಜ್ಯಸಭೆಯ ಸದನದ ನಾಯಕರಾಗಿದ್ದರು.

ಭಾರತ 'ರತ್ನ' ಪ್ರಣಬ್​ ಮುಖರ್ಜಿ ಜೀವನ ಪಯಣ

ಆದರೆ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಮುಖರ್ಜಿ ಅವರನ್ನು ಕಾಂಗ್ರೆಸ್​​ನಿಂದ ಹೊರಗಿಡಲಾಯಿತು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಬಳಿಕ ಪ್ರಧಾನಿ ಪಿ.ವಿ.ನರಸಿಂಹ ರಾವ್, 1991ರಲ್ಲಿ ಯೋಜನಾ ಆಯೋಗದ ಮುಖ್ಯಸ್ಥರಾಗಿ ಮತ್ತು 1995ರಲ್ಲಿ ವಿದೇಶಾಂಗ ಸಚಿವರನ್ನಾಗಿ ಮುಖರ್ಜಿ ಅವರನ್ನು ನೇಮಿಸಿದರು.

2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದರು. ಅಂದಿನಿಂದ 2012 ರ ವರೆಗೂ ಪ್ರಣಬ್​ ಮುಖರ್ಜಿ ಸಂಪುಟದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. 2004 ರಿಂದ 2006ರ ವರೆಗೆ ರಕ್ಷಣಾ ಸಚಿವರಾಗಿ, 2006 ರಿಂದ 2009ರ ವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ, 2009 ರಿಂದ 2012ರ ವರೆಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2012 ರಿಂದ 2017ರ ವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ರಾಷ್ಟ್ರಪತಿ ಸ್ಥಾನದಿಂದ ಹೊರಬಂದ ಬಳಿಕ ವೃದ್ಧಾಪ್ಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಮತ್ತೆ ಚುನಾವಣೆಗೆ ಸ್ಪರ್ಧಿಸದಿರಲು ಮತ್ತು ರಾಜಕೀಯದಿಂದ ನಿವೃತ್ತಿ ಹೊಂದಲು ಪ್ರಣಬ್​​ ಮುಖರ್ಜಿ ನಿರ್ಧರಿಸಿದರು.

ಪ್ರಣಬ್ ಮುಖರ್ಜಿ 1957ರಲ್ಲಿ ಸುವ್ರಾ ಮುಖರ್ಜಿ ಅವರನ್ನು ವಿವಾಹವಾದರು. ಆದರೆ 2015ರಲ್ಲಿ ಹೃದಯ ವೈಫಲ್ಯದಿಂದ ಸುವ್ರಾ ಮುಖರ್ಜಿ ನಿಧನರಾದರು. ಇವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳಿದ್ದಾರೆ. ಇವರ ಹಿರಿಯ ಮಗ ಅಭಿಜಿತ್​ ಮುಖರ್ಜಿ ಪಶ್ಚಿಮ ಬಂಗಾಳದ ಜಂಗಿಪುರ್​ ಕ್ಷೇತ್ರದ ಕಾಂಗ್ರೆಸ್​ ಸಂಸದರಾಗಿದ್ದರು. ಇವರ ಮಗಳು ಶರ್ಮಿಷ್ಟಾ ನೃತ್ಯಗಾರ್ತಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಲ್ಲಿದ್ದಾರೆ. ಪ್ರಣಬ್​ ಮುಖರ್ಜಿ ನೋಯ್ಡಾದ ಸೆಕ್ಟರ್​​​ 26ರಲ್ಲಿ ಇದ್ದ ತಮ್ಮ ನಿವಾಸವನ್ನು ರಾಮಕೃಷ್ಣ ಪರಮಹಂಸ ಮಿಷನ್​ಗೆ ದೇಣಿಗೆ ನೀಡಿದ್ದರು.

ಪ್ರಣಬ್ ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್​ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಗೋವಾ ವಿಶ್ವವಿದ್ಯಾಲಯ, ಇಸ್ತಾಂಬೂಲ್​ ವಿಶ್ವವಿದ್ಯಾಲಯ. ಇಸ್ರೇಲ್​ನ ಹೆಬ್ರಿವ್​ ವಿಶ್ವವಿದ್ಯಾಲಯ ಹಾಗೂ ಜೋರ್ಡಾನ್ ವಿಶ್ವವಿದ್ಯಾಲಯ ಮುಖರ್ಜಿ ಅವರಿಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಿದೆ.

ಪ್ರಣಬ್​ ಮುಖರ್ಜಿ ಅವರಿಗೆ 2019ರಲ್ಲಿ ರಾಷ್ಟ್ರಪತಿ ರಾಮ್​​ ನಾಥ್ ಕೋವಿಂದ್​ ಅವರು ​ಭಾರತದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಯಾದ​​ 'ಭಾರತ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದರು. ದಶಕಗಳ ಕಾಲ ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ 2019ರ ಜನವರಿಯಲ್ಲಿ 'ಭಾರತ ರತ್ನ' ಪ್ರಶಸ್ತಿ ಘೋಷಿಸಿತ್ತು. 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು.

1984ರಲ್ಲಿ ಯೂರೋನಮಿ ಮ್ಯಾಗಜಿನ್ ಪ್ರಣವ್ ಮುಖರ್ಜಿ ಅವರನ್ನು ಜಗತ್ತಿನ ಅತ್ಯುತ್ತಮ ಹಣಕಾಸು ಸಚಿವ ಎಂಬ ಪುರಸ್ಕಾರ ನೀಡಿತ್ತು. 2010ರಲ್ಲಿ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪರಿಗಣಿಸುವ ಎಮರ್ಜಿಂಗ್ ಮಾರ್ಕೆಟ್ಸ್ ದಿನ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಏಷ್ಯಾದಲ್ಲಿನ ವರ್ಷದ ಹಣಕಾಸು ಸಚಿವ ಪುರಸ್ಕಾರಕ್ಕೆ ಪ್ರಣಬ್ ಭಾಜನರಾಗಿದ್ದರು.

ABOUT THE AUTHOR

...view details