ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದ ಬಗ್ಗೆ ಎದ್ದಿರುವ ಊಹಾಪೋಹ, ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿರುವ ಅವರ ಮಕ್ಕಳು ನಮ್ಮ ತಂದೆ ಜೀವಂತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ತಂದೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ಪತ್ರಕರ್ತರು ಸುಳ್ಳು ಸುದ್ದಿ ಪಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ, ತಂದೆ ಇನ್ನೂ ಜೀವಂತವಾಗಿದ್ದಾರೆ ಮತ್ತು ಅವರ 'ಹೆಮೋಡೈನಮಿಕ್' ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಇನ್ನು ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ತಂದೆಯ ಕುರಿತ ವದಂತಿಗಳು ಸುಳ್ಳು. ಆಸ್ಪತ್ರೆಯಿಂದ ಮಾಹಿತಿಗಳು ಬರುತ್ತಿರುವ ಕಾರಣ ಸದ್ಯಕ್ಕೆ ನಾನು ನನ್ನ ಫೋನ್ ಅನ್ನು ಫ್ರೀ ಆಗಿ ಇಟ್ಟುಕೊಳ್ಳಬೇಕು, ದಯವಿಟ್ಟು ನನಗೆ ಕರೆ ಮಾಡುತ್ತಿರಬೇಡಿ ಎಂದು ವಿಶೇಷವಾಗಿ ಮಾಧ್ಯಮದವರ ಬಳಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೋಮಾದಲ್ಲಿರುವ ಪ್ರಣಬ್ ಮುಖರ್ಜಿ ಅವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆರ್ಆರ್ ಮಿಲಿಟರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆಗಸ್ಟ್ 10 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಅದೇ ದಿನ ರಾತ್ರಿ ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.