ನವದೆಹಲಿ:ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಂದ ಗೋಡ್ಸೆ 'ಓರ್ವ ದೇಶಭಕ್ತ' ಎಂದು ಹೇಳಿಕೆ ನೀಡಿ ಈ ಹಿಂದೆ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದ ಬಿಜೆಪಿ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣ ಆರೋಪಿಯಾಗಿರುವ ಇವರು ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈ ವೇಳೆ ಪ್ರಚಾರ ನಡೆಸುತ್ತಿದ್ದಾಗ ಗೋಡ್ಸೆ ನಿಜವಾದ ದೇಶಭಕ್ತ ಎಂದು ಕರೆದಿದ್ದರು.
ಇಂದು ನಡೆದ ಸಂಸದ ಅಧಿವೇಶನದ ವೇಳೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರನ್ನ ದೇಶಭಕ್ತ ಎಂದು ಅವರು ಕರೆದಿದ್ದು, ಅವರ ಹೇಳಿಕೆ ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ಸಹ ನಡೆಸಿದವು.
ಲೋಕಸಭೆಯಲ್ಲಿ ವಿಶೇಷ ಭದ್ರತಾ ಕಾಯ್ದೆ ತಿದ್ದುಪಡಿ ವೇಳೆ ಡಿಎಂಕೆ ಸಂಸದ ಎ.ರಾಜಾ ಮಾತನಾಡಿ, ಗೋಡ್ಸೆ ಗಾಂಧಿಯವರನ್ನ ಏಕೆ ಕೊಂದರು ಎಂದು ಪ್ರಶ್ನೆ ಮಾಡಿದಾಗ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮಧ್ಯಪ್ರವೇಶ ಮಾಡಿ ದೇಶ ಭಕ್ತರನ್ನು ನೀವು ಉದಾಹರಣೆಯಾಗಿ ಇಲ್ಲಿ ನೀಡಬೇಡಿ ಎಂದಿದ್ದಾರೆ. ಈ ಹಿಂದೆ ಸಹ ಇಂತಹ ಹೇಳಿಕೆ ನೀಡಿದ್ದ ಠಾಕೂರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.