ನವದೆಹಲಿ:ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದಿರುವ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆಗೆ ಭಾರಿ ವಿರೋಧ ಬಂದ ಬೆನ್ನಲ್ಲೇ ಪ್ರಗ್ಯಾರನ್ನು ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯಿಂದ ಉಚ್ಛಾಟಿಸಲಾಗಿದೆ.
ಪ್ರಗ್ಯಾ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಪ್ರಗ್ಯಾ ಸಿಂಗ್ ಹೇಳಿಕೆ ಖಂಡನೀಯ, ರಾಷ್ಟ್ರೀಯ ಪಕ್ಷ ಬಿಜೆಪಿ ಅಂತಹ ಹೇಳಿಕೆ ಅಥವಾ ಸಿದ್ಧಾಂತವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಸಂಸದೆ ಪ್ರಗ್ಯಾರನ್ನು ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯಿಂದ ಉಚ್ಛಾಟಿಸಿದಿರುವುದಲ್ಲದೇ ಅವರು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನಡ್ಡಾ ಹೇಳಿದ್ದಾರೆ. ಇನ್ನೊಂದೆಡೆ ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಸಿದ್ದಾಂತವನ್ನ ಸರ್ಕಾರ ಮತ್ತು ಪಕ್ಷ ಒಪ್ಪುವುದಿಲ್ಲ. ಪ್ರಗ್ಯಾ ಸಿಂಗ್ ಹೇಳಿಕೆಯನ್ನ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.