ನವದೆಹಲಿ: 150ನೇ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಸಂದೇಶ ಸಾರಲು ನಿನ್ನೆ ನಟಿ, ಸಂಸದೆ ಹೇಮಾಮಾಲಿನಿ ಸಂಸತ್ ಭವನದ ಮುಂದೆ ಪೊರಕೆ ಹಿಡಿದು ಕಸ ಗುಡಿಸಿದ್ದರು. ಇದೀಗ ಅವರು ಕಸ ಗುಡಿಸಿದ ಸ್ಟೈಲ್ ಭಾರಿ ಟ್ರೋಲ್ ಆಗ್ತಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಹೇಮಾಮಾಲಿನಿ ಕಸ ಗುಡಿಸುವ ಯತ್ನವನ್ನಷ್ಟೇ ಮಾಡಿದ್ದರು. ಅವರು ಕ್ಯಾಮರಾಗಾಗಿ ಮಾತ್ರ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ ಎಂದು ಟ್ವಿಟರ್ನಲ್ಲಿ ವ್ಯಂಗ್ಯ, ಟೀಕೆ ವ್ಯಕ್ತವಾಗುತ್ತಿದೆ.
ಈ ಮೂಲಕ ಹೇಮಾಮಾಲಿನಿ ಮೇಲೆ ಟ್ವೀಟಾಸ್ತ್ರ ಹೂಡಿರುವ ಓಬರ್ ಅಬ್ದುಲ್ಲಾ, ಮೇಡಂ, ಮೊದಲು ಪೊರಕೆ ಹಿಡಿಯುವುದು ಹೇಗೆಂದು ಕಲಿಯಿರಿ. ಮುಂದೆ ಫೋಟೋ ತೆಗೆಸಿಕೊಳ್ಳುವಾಗ ಖಾಸಗಿಯಾಗಿ ಅಭ್ಯಾಸ ಮಾಡಿ. ಈ ರೀತಿಯ ತಂತ್ರದಿಂದ ಮಥುರಾದಲ್ಲಿ ಸ್ವಚ್ಛತೆ ತರಲು ಸಾಧ್ಯವಾಗದು ಎಂದು ಕುಟುಕಿದ್ದಾರೆ.
ಅಂತೆಯೇ ಟ್ವಿಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿವೆ. ಅಜಾರಿಶ್ ಖಾನ್ ಎಂಬುವರು, ಅನುರಾಗ್ ಠಾಕೂರ್ ಕ್ರಿಕೆಟ್ ಕೌಶಲ್ಯ ಬಳಸಿ ಕಸ ಗುಡಿಸಿದರೆ, ಹೇಮಾಮಾಲಿನಿ ನಟನಾ ಕೌಶಲ್ಯ ಬಳಸಿ ಕಸ ಗುಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸ್ವಚ್ಛತೆಗೆ ಹೇಮಾ ಕೊಡುಗೆ, ಭಾರತೀಯ ಸಿನಿಮಾಕ್ಕೆ ವಿವೇಕ್ ಒಬೆರಾಯ್ ಕೊಡುಗೆಯಂತೆಯೇ ಇದೆ ಎಂದು ಜುನ್ನಿ ಭಟ್ ಟ್ವೀಟ್ ಮಾಡಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದ ಫೋಟೋ ಹೊರತಾಗಿ ಡ್ರೀಮ್ ಗರ್ಲ್ ಮೊದಲು ಪೊರಕೆ ಹಿಡಿಯೋದು ಕಲೀಬೇಕು. ಸ್ಕಿಲ್ ಇಂಡಿಯಾ ಯೋಜನೆಯಡಿ ತರಬೇತಿ ಅಗತ್ಯವಿದೆ ಎಂದು ಅರುಣ್ ಶೌರಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.