ನವದೆಹಲಿ :ಹೊಸ 14 ಪ್ರಕರಣಗಳು ಸೇರಿ ಈವರೆಗೂ ಸುಮಾರು 107 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. 107 ಮಂದಿಯಲ್ಲಿ ವಿದೇಶಿ ಸೋಂಕಿತರೂ ಇದ್ದಾರೆ ಎಂದು ಕೇಂದ್ರ ವಿವರಣೆ ನೀಡಿದೆ. ಕರ್ನಾಟಕ, ಉತ್ತರಪ್ರದೇಶ ಹಾಗೂ ಹರಿಯಾಣ ಹಾಗೂ ಇನ್ನೂ ಕೆಲ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೇಶದಲ್ಲಿ ತುಂಬಾ ವೇಗವಾಗಿ ಕೊರೊನಾ ಹಬ್ಬುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಈ ಸೋಂಕನ್ನು ''ಅಧಿಸೂಚಿತ ವಿಕೋಪ''ಗಳ ಪಟ್ಟಿಗೆ ಸೇರಿಸಿ ಶನಿವಾರ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಎನ್ಡಿಆರ್ಎಫ್ ಅನುದಾನ ಬಳಕೆ ಮಾಡುವಂತೆ ಕೂಡಾ ಸೂಚಿಸಿತ್ತು. ಪ್ರಪಂಚದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡಿದೆ. ಎಲ್ಲಾ ರಾಷ್ಟ್ರಗಳು ತಮ್ಮದೇ ಆದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಚೀನಾದಲ್ಲಿ 80 ಸಾವಿರಕ್ಕೂ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದಾರೆ. ಅತಿ ಹೆಚ್ಚು ಸೋಂಕಿತರಿರೋ ದೇಶ ಕೂಡ ಇದೇ ಚೀನಾ. 2ನೇ ಸ್ಥಾನದಲ್ಲಿ ಇಟಲಿ ಇದ್ದು, 21 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರಿದ್ದಾರೆ.