ಅಹಮದಾಬಾದ್: ಸಂಚಾರ ನಿಯಮ ಉಲ್ಲಂಘಿಸಿದ ಪೋಷ್ ಕಾರು ಮಾಲೀಕನಿಗೆ ಸಂಚಾರಿ ಪೊಲೀಸರು ಬರೊಬ್ಬರಿ 27.68 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಕಾರಿನ ಮಾಲಕನ ನಿಯಮ ಉಲ್ಲಂಘನೆ ಕಥೆಯು 2019ರ ನವೆಂಬರ್ ತಿಂಗಳಿಗೆ ಕರೆದೊಯುತ್ತದೆ. ಆಗ ಈ ಕಾರಿಗೆ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ. ಇದರ ಜೊತೆಗೆ ಅಗತ್ಯವಾದ ವಾಹನ ದಾಖಲೆಗಳು ಸಹ ಇರಲಿಲ್ಲವಂತೆ.
ಅಷ್ಟೇ ಅಲ್ಲ ವಾಹನ ಚಾಲನ ಪರವಾನಿಗೆ, ವಿಮಾ ಪತ್ರ, ವಾಹನ ನೋಂದಣಿ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಸೇರಿದಂತೆ ಇತರ ಯಾವುದೇ ದಾಖಲೆ ಪತ್ರಗಳು ಸಹ ಇರಲಿಲ್ಲ. ಆಗ ಪೊಲೀಸರು ವಾಹನ ಮಾಲೀಕರಿಗೆ ತಕ್ಷಣವೇ 9.80 ಲಕ್ಷ ರೂ. ದಂಡ ವಿಧಿಸಿದ್ದರು.
ಆರು ವಾರಗಳ ಬಳಿಕ ದಂಡದ ಪ್ರಮಾಣವನ್ನು ಪರಿಷ್ಕರಿಸಿ ಪೊಲೀಸರು 27.68 ಲಕ್ಷ ರೂ.ಗೆ ಏರಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ್ದು, 'ಸಂಚಾರ ನಿಯಮ ಉಲ್ಲಂಘನೆಗಾಗಿ ದೇಶದಲ್ಲಿ ಇದು ಗರಿಷ್ಠ ಪ್ರಮಾಣದ ದಂಡ' ಎಂದು ಕಾರು ಮಾಲೀಕ ಬರೆದುಕೊಂಡಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಬೇರೆ-ಬೇರೆ ರಾಷ್ಟ್ರಗಳಲ್ಲಿನ ಚಾಲಕರು ಗರಿಷ್ಠ ಪ್ರಮಾಣದ ದಂಡ ಪಾವತಿಸಿದ್ದಾರೆ. 2007ರಲ್ಲಿ ಬ್ರಿಟಿಷ್ ಉದ್ಯಮಿಯೊಬ್ಬರು ಚಾಲನೆ ವೇಳೆ ಸೆಲ್ ಫೋನ್ ಬಳಸಿ ವೇಗವಾಗಿ ಚಲಿಸಿದ್ದಕ್ಕೆ 4,643 ಡಾಲರ್ ದಂಡ ಪಾವತಿಸಿದ್ದರು. ವರ್ಜೀನಿಯಾದಲ್ಲಿ ಚಾಲಕನೊಬ್ಬ 3,000 ಡಾಲರ್, ಕೆನಡಾದಲ್ಲಿ ಮೋಟಾರ್ ಸೈಕಲ್ ಸವಾರನೊಬ್ಬ 164 ಕಿ.ಮೀ ವೇಗದಲ್ಲಿ ಚಲಿಸಿದ್ದಕ್ಕೆ 12, 000 ದಂಡ ಹಾಗೂ ಫಿನ್‌ಲ್ಯಾಂಡ್‌ನಲ್ಲಿ 58,000 ಡಾಲರ್ ದಂಡವನ್ನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ನೀಡಿದ್ದಾರೆ.