ಸುಳ್ಳು ಸುದ್ದಿ ಅಥವಾ ಫೇಕ್ ನ್ಯೂಸ್ ಹಾವಳಿ ಈಗೀಗ ವಿಪರೀತ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾ ಬಂದ ಮೇಲೆ ಈ ಫೇಕ್ ನ್ಯೂಸ್ ಹರಡುವಿಕೆ ತುಂಬಾ ಸುಲಭವಾಗಿ ಬಿಟ್ಟಿದೆ. ಸರ್ಕಾರಗಳು ಹಾಗೂ ತನಿಖಾ ಸಂಸ್ಥೆಗಳಿಗೆ ಈ ಸುಳ್ಳು ಸುದ್ದಿಯ ಮೂಲ ಹುಡುಕುವುದು ಹಾಗೂ ಅದು ಮತ್ತಷ್ಟು ಹರಡಿ ಸಮಾಜದಲ್ಲಿ ಅಶಾಂತಿ ಉಂಟಾಗದಂತೆ ಮಾಡುವುದೇ ಒಂದು ದೊಡ್ಡ ತಲೆನೋವಾಗುತ್ತಿದೆ. ಇಂಥದೊಂದು ಸುಳ್ಳು ಸುದ್ದಿಯ ಹಾವಳಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ವಿಪರೀತವಾಗಿ ವ್ಯಾಪಿಸಿದೆ. ಫೇಕ್ ನ್ಯೂಸ್ ವಿರುದ್ಧ ವಿಶ್ವದ ವಿಭಿನ್ನ ರಾಷ್ಟ್ರಗಳು ಯಾವೆಲ್ಲ ಕಾನೂನು ಕ್ರಮಗಳನ್ನು ಜಾರಿ ಮಾಡಿವೆ ಎಂಬ ಕುತೂಹಲಕಾರಿ ಅಂಶಗಳನ್ನು ತಿಳಿಯೋಣ.
ಫ್ರಾನ್ಸ್: 1881 ರ ಮಾಧ್ಯಮ ಸ್ವಾತಂತ್ರ್ಯ ಕಾನೂನಿನಡಿ ಫ್ರಾನ್ಸ್ನಲ್ಲಿ ಫೇಕ್ ನ್ಯೂಸ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಪ್ರಕಟಿಸಿ ಸಾರ್ವಜನಿಕ ಶಾಂತಿಯನ್ನು ಕದಡುವುದು ಕಾನೂನು ಬಾಹಿರ ಕೃತ್ಯವೆಂದು ಪರಿಗಣಿಸಲಾಗಿದೆ. ವದಂತಿಯನ್ನು ಹರಡುವುದು, ತಿರುಚಿದ ಸುದ್ದಿಗಳನ್ನು ಪ್ರಕಟಿಸುವುದು, ಯಾವುದೋ ಗೊತ್ತಿಲ್ಲದ ಮೂಲಗಳನ್ನು ಉಲ್ಲೇಖಿಸಿ ಸುಳ್ಳು ಸುದ್ದಿ ಹರಡುವುದನ್ನು ನಿಷೇಧಿಸಲಾಗಿದೆ.
2019 ರಲ್ಲಿ ಅಂಗೀಕರಿಸಲಾದ ಕಾಯ್ದೆಯನ್ವಯ ಫೇಕ್ ನ್ಯೂಸ್ ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ಯಾವುದೇ ಮಾಧ್ಯಮಗಳಲ್ಲಿ ಬಿತ್ತರಿಸಲಾದ ಸುಳ್ಳು ಸುದ್ದಿಗಳನ್ನು ತಕ್ಷಣ ತೆಗೆದು ಹಾಕುವ ಹಾಗೂ ಅದನ್ನು ಪ್ರಕಟಿಸುವ ಮಾಧ್ಯಮಗಳನ್ನು ನಿಷೇಧಿಸುವ ಅಧಿಕಾರವನ್ನು ತನಿಖಾಧಿಕಾರಿಗಳಿಗೆ ನೀಡಲಾಗಿದೆ.
ಸಿಂಗಾಪುರ: ಆನ್ಲೈನ್ ಮೂಲಕ ಸುಳ್ಳು ಸುದ್ದಿಯನ್ನು ಬಿತ್ತರಿಸುವುದು ಕ್ರಿಮಿನಲ್ ಚಟುವಟಿಕೆ ಎಂದು ಮೇ 2019 ರಲ್ಲಿ ಸಿಂಗಾಪುರ ಕಾನೂನು ರೂಪಿಸಿದೆ. ಸಿಂಗಾಪುರ ಪಾರ್ಲಿಮೆಂಟ್ನಲ್ಲಿ ಪಾಸ್ ಮಾಡಲಾಗಿರುವ ಈ ಕಾನೂನು ಸಾಕಷ್ಟು ಬಿಗಿಯಾಗಿದೆ. ಸುಳ್ಳು ಸುದ್ದಿ ಹರಡುವವರನ್ನು ಬಂಧಿಸಿ ಜೈಲಿಗಟ್ಟುವ ಹಾಗೂ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಲಾಗಿದೆ.
ಯುನೈಟೆಡ್ ಕಿಂಗಡಮ್: ಸುಳ್ಳು ಸುದ್ದಿ ಹರಡುವಿಕೆಯನ್ನು ನಿರ್ಬಂಧಿಸುವುದು ಹೇಗೆಂದು ಸುಮಾರು 18 ತಿಂಗಳುಗಳ ಕಾಲ ಚಿಂತನ ಮಂಥನ ನಡೆಸಿದ ಯುಕೆ ಸರ್ಕಾರ ಜುಲೈ 29, 2018 ರಂದು ವರದಿಯೊಂದನ್ನು ಪ್ರಕಟಿಸಿದರು. ಇದರ ಪ್ರಕಾರ ಸುಳ್ಳು ಸುದ್ದಿ ಪ್ರಕಟಿಸುವುದನ್ನು ಕ್ರಿಮಿನಲ್ ಚಟುವಟಿಕೆ ಎಂದು ಪರಿಗಣಿಸಲಾಗಿದೆ.