ನವದೆಹಲಿ:ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮೇಣದಬತ್ತಿ ಹಿಡಿದು ರಾಜ್ಘಾಟ್ನಿಂದ ಇಂಡಿಯಾ ಗೇಟ್ವರೆಗೆ ಮೆರವಣಿಗೆ ನಡೆಸುತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತನ್ನ ಮೇಲಾಗಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಳು. ಈ ನಡುವೆ ಗುರುವಾರ ಸಂತ್ರಸ್ತೆ ನ್ಯಾಯಾಲಯಕ್ಕೆ ಬರುತ್ತಿದ್ದ ವೇಳೆ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ಅತ್ಯಾಚಾರ ಆರೋಪಿಗಳು ಸೇರಿದಂತೆ ಐವರು ಸೇರಿ ಈಕೆಗೆ ಬೆಂಕಿ ಹಚ್ಚಿದ್ದರು.
ಘಟನೆಯಿಂದ ಶೇ.90ರಷ್ಟು ದೇಹ ಸುಟ್ಟು ಹೋಗಿದ್ದರಿಂದ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಸಂತ್ರಸ್ತೆ ಕೊನೆಯುಸಿರೆಳೆದಿದ್ದಳು. ಘಟನೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ನವದೆಹಲಿಯಲ್ಲಿ ಸಂಜೆ ಯುವತಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿತ್ತು. ಆದರೆ ಪೊಲೀಸರು ಮೇಣದಬತ್ತಿ ಹಿಡಿದು ಸಾಗುತಿದ್ದ ಪ್ರತಿಭಟನಾಕಾರರನ್ನ ತಡೆದಿದ್ದಾರೆ.
ಹೀಗಾಗಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನ ತಳ್ಳಿ ಪ್ರತಿಭಟನಾಕಾರರು ಮುನ್ನುಗ್ಗಲು ಯತ್ನಿಸಿದಾಗ, ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಪ್ರತಿಭಟನಾಕಾರರಿಗೆ ಅರುಣ್ ಜೇಟ್ಲಿ ಮೈದಾನದಿಂದ ಮುಂದೆ ಹೋಗಲು ಅನುಮತಿ ಇಲ್ಲ ಹೀಗಾಗಿ ತಡೆದಿದ್ದೆವು. ಆದರು ಪ್ರತಿಭಟನಾಕಾರರು ಮೇಣದ ಬತ್ತಿ ಹಿಡಿದು ಮುಂದೆ ಮುಂದೆ ಬಂದಿದ್ದರಿಂದ ಜಲ ಫಿರಂಗಿ ಪ್ರಯೋಗಿಸಿದ್ದೇವೆ ಎಂದಿದ್ದಾರೆ.