ದರ್ರಾಂಗ್:ತುಂಬು ಗರ್ಭಿಣಿಯನ್ನು ಲೆಕ್ಕಿಸದೇ ಮೂವರು ಮಹಿಳೆಯರನ್ನು ಮನಬಂದತೆ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ. ಪೊಲೀಸರ ವರ್ತನೆಗೆ ಆ ಮಗು ಪ್ರಪಂಚ ನೋಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವ ಘಟನೆ ದರ್ರಾಂಗ್ ಜಿಲ್ಲೆ ಸಿಪಾಝಾರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಈ ಘಟನೆ ಸೆಪ್ಟಂಬರ್ 8 ರಂದು ನಡೆದಿತ್ತು. ಸಂತ್ರಸ್ತ ಮಹಿಳೆ ಕುಟುಂಬಸ್ಥರು ದಿನಾಂಕ 10ರಂದು ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಅಸ್ಸೋಂ ಮಾಧ್ಯಮವೊಂದರಲ್ಲಿ ಈ ಸುದ್ದಿ ಬಿತ್ತರಿಸಿದಾಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು..?
ಅನ್ಯ ಸಮುದಾಯದ ಯುವಕ - ಯುವತಿ ಮಧ್ಯೆ ಪ್ರೇಮಾಂಕುರವಾಗಿದೆ, ಯುವಕ ಮತ್ತು ಯುವತಿ ಮನೆಬಿಟ್ಟು ಓಡಿ ಹೋಗಿದ್ದಾರೆ. ಯುವತಿ ಕುಟುಂಬಸ್ಥರು ಯುವಕನ ಕುಟುಂಬದ ಮೇಲೆ ದೂರು ಸಲ್ಲಿಸಿದ್ದರು. ವಿಚಾರಣೆಗೆಂದು ಪೊಲೀಸರು ಗರ್ಭಿಣಿ ಸೇರಿದಂತೆ ಮೂವರು ಸಹೋದರಿಯರನ್ನು ಠಾಣೆಗೆ ಕರೆದೊಯ್ಯಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ಗರ್ಭಿಣಿಯನ್ನು ಲೆಕ್ಕಿಸದೇ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ, ಬಟ್ಟೆ ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗ್ತಿದೆ. ಪೊಲೀಸರು ಗರ್ಭಿಣಿ ಹೊಟ್ಟೆಗೆ ಒದ್ದಿದ್ದರಿಂದ ರಕ್ತಸ್ರಾವ ಹೆಚ್ಚಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಪ್ರಯೋಜನವಾಗಲಿಲ್ಲ. ತಾಯಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ.
ಮಾನವೀಯತೆಯನ್ನೂ ಲೆಕ್ಕಿಸದೇ ಥಳಿಸಿರುವ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಪೇದೆಯನ್ನು ಅಸ್ಸೋಂ ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ. ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಸಂಘ ಆಗ್ರಹಿಸಿದೆ. ಈ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.