ಲಖನೌ (ಉತ್ತರ ಪ್ರದೇಶ): ಎನ್ಕೌಂಟರ್ನಲ್ಲಿ ಹತ್ಯೆಯಾದಗ್ಯಾಂಗ್ಸ್ಟರ್ ವಿಕಾಸ್ ದುಬೆ ವಿರುದ್ಧ ಎಫ್ಐಆರ್ ದಾಖಲಿಸಲು ಧೈರ್ಯ ತೋರಿದ್ದ ಪೊಲೀಸ್ ಮಾಹಿತಿದಾರ ರಾಹುಲ್ ತಿವಾರಿ ಪತ್ತೆಯಾಗಿದ್ದಾನೆ.
ಸುಮಾರು 14 ದಿನಗಳಿಂದ ಈತ ತನ್ನ ಕುಟುಂಬದೊಂದಿಗೆ ನಾಪತ್ತೆಯಾಗಿದ್ದು, ಈ ಘಟನೆ ತೀವ್ರ ಕುತೂಹಲ ಕೆರಳಿಸಿತ್ತು. ಅದರ ಜೊತೆಗೆ ಹಲವಾರು ಅನುಮಾನಗಳನ್ನೂ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಈತನಿಗೆ ಹುಡುಕಾಟ ಆರಂಭಿಸಿದ್ದರು.
ರಾಹುಲ್ ತಿವಾರಿ ವಿಕಾಸ್ ದುಬೆ ವಿರುದ್ಧ ಆಸ್ತಿ ಕಬಳಿಕೆ ಆರೋಪ ಹೊರಿಸಿ ಚೌಬೇಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದಕ್ಕೂ ಮೊದಲು ತಿವಾರಿಯನ್ನು ದುಬೆ ಸಹಚರರು ಥಳಿಸಿ, ಅವನ ವಾಹನವನ್ನು ಹೊತ್ತೊಯ್ದಿದ್ದರು. ಇದಕ್ಕೂ ಕೂಡಾ ಚೌಬೇಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.
ಮೂಲಗಳ ಪ್ರಕಾರ, ಜುಲೈ 1ರಂದು ಪೊಲೀಸ್ ಠಾಣೆಯ 4 ಮಂದಿ ರಾಹುಲ್ ತಿವಾರಿಯ ಮನೆಯ ಭೇಟಿ ನೀಡಿ, ವಿಚಾರಣೆ ನಡೆಸಿ ವಾಪಸ್ಸಾಗಿದ್ದರು. ಇದಾದ ನಂತರವೂ ತಿವಾರಿಯನ್ನು ದುಬೆ ಸಹಚರರು ಥಳಿಸಿದ್ದರು.
ಅದಾದ ಕೆಲವು ದಿನಗಳ ನಂತರ ರಾಹುಲ್ ತಿವಾರಿ ತನ್ನ ಕುಟುಂಬದೊಂದಿಗೆ ಕಾಣೆಯಾಗಿದ್ದ. ಪೊಲೀಸರು ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಇಂದು ಆತ ಪತ್ತೆಯಾಗಿದ್ದು, ಊಹಾಪೋಹಗಳಿಗೆ ತೆರೆಬಿದ್ದಿದೆ.