ಅಂಬಾಲಾ(ಹರಿಯಾಣ): ವಿರೋಧದ ನಡುವೆಯೂ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳನ್ನು ಮಂಡಿಸಿದ್ದು, ಇದನ್ನು ವಿರೋಧಿಸಿ ಹರಿಯಾಣದಲ್ಲಿ ರೈತ ಸಂಘಗಳು ಪ್ರತಿಭಟನೆಗೆ ಕರೆ ನೀಡಿವೆ. ಸಾವಿರಾರು ರೈತರು ಪ್ರತಿಭಟನೆ ನಡೆಸಲಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಹರಿಯಾಣದ ಅಂಬಾಲಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೃಷಿ ಮಸೂದೆ ವಿರೋಧಿಸಿ ರೈತ ಸಂಘಗಳಿಂದ ಪ್ರತಿಭಟನೆಗೆ ಕರೆ: ಹರಿಯಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ - ರೈತ ಸಂಘಗಳಿಂದ ಪ್ರತಿಭಟನೆಗೆ ಕರೆ
ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಹರಿಯಾಣದಲ್ಲಿ ರೈತ ಸಂಘಗಳು ಪ್ರತಿಭಟನೆಗೆ ಕರೆ ನೀಡಿವೆ.
ಇಂದು ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಮಂಡಿಸಿದ್ದಾರೆ. ಈ ಮಸೂದೆಗಳು ರೈತರ ಉತ್ಪನ್ನಗಳ ಎಲೆಕ್ಟ್ರಾನಿಕ್ ವಹಿವಾಟು ಹಾಗೂ ಕೃಷಿ ಉತ್ಪನ್ನಗಳ ನೇರ ಆನ್‌ಲೈನ್ ಖರೀದಿ ಮತ್ತು ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ ಇವು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಮಸೂದೆಗಳಾಗಿವೆ, ಆಹಾರ ಭದ್ರತಾ ವ್ಯವಸ್ಥೆಗಳನ್ನ ದುರ್ಬಲಗೊಳಿಸುತ್ತವೆ ಎಂದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿ ಇದರ ವಿರುದ್ಧ ಟೀಕೆ, ವಿರೋಧಗಳು ವ್ಯಕ್ತವಾಗಿವೆ. ಇಂದು ರಾಜ್ಯಸಭೆಯಲ್ಲಿ ಮಸೂದೆಗಳು ಮಂಡನೆಯಾಗುತ್ತಿದ್ದಂತೆಯೇ ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ 16ಕ್ಕೂ ಹೆಚ್ಚು ರೈತ ಸಂಘಗಳು ಪ್ರತಿಭಟನೆಗೆ ಕರೆ ನೀಡಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಹರಿಯಾಣದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.