ರಾಂಚಿ (ಜಾರ್ಖಂಡ್): ಅಭಿವೃದ್ಧಿಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಉದ್ದೇಶದಿಂದ ನಕ್ಸಲ್ ಪೀಡಿತ ಜಿಲ್ಲೆಯಾದ ಪಲಮು ಜಿಲ್ಲೆಗೆ ರಸ್ತೆ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಕಾಮಗಾರಿ ಆರಂಭಿಸಿದೆ.
ಇಲ್ಲಿನ ರಾಜ್ಕೇಟ ಗ್ರಾಮದಲ್ಲಿ 50 ಕುಟುಂಬಗಳು ವಾಸಿಸುತ್ತಿದ್ದು, ನಕ್ಸಲ್ ಪೀಡಿತ ಹಳ್ಳಿಯಾಗಿದೆ. ಇದೀಗ ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯು ಎರಡು ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸಲಿದ್ದು, ರಸ್ತೆ ಕಾಮಗಾರಿ ಭರದಿಂದ ಸಾಗಿದೆ.
ಇದೀಗ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿ ಭದ್ರತೆ ಒದಗಿಸಲಾಗಿದೆ. ಇನ್ನು ಈಕುರಿತಂತೆ ಪಲಮು ಎಸ್ಪಿ ಅಜಯ್ ಲಿಂಡ ಮಾತನಾಡಿ, ರಸ್ತೆ ಕಾಮಗಾರಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಮೂಲಗಳ ಪ್ರಕಾರ ರಸ್ತೆ ನಿರ್ಮಾಣದ ಬಳಿಕ ನಕ್ಸಲ್ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವುದು ಇನ್ನಷ್ಟು ಸುಲಭವಾಗಲಿದೆ.
ಇನ್ನೂ ಸ್ಥಳಿಯರಾದ ಸಂತೋಷ್ ಯಾದವ್ ಮಾತನಾಡಿ, ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ರಸ್ತೆ ನಿರ್ಮಾಣವಾಗುತ್ತಿದೆ. ಇದಕ್ಕೂ ಮೊದಲು ನಾವು ಹಲವು ಸಮಸ್ಯೆಗಳನ್ನು ಎದುರಿಸಿದ್ದೆವು. ಇದೀಗ ರಸ್ತೆ ನಿರ್ಮಾಣದಿಂದ ಸಮಸ್ಯೆಗಳು ದೂರಾಗಲಿದೆ ಎಂದಿದ್ದಾರೆ.