ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯ ಮಸೂದೆಯನ್ನು ಇಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ.
ಮಸೂದೆ ಮಂಡನೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕೇವಲ ಕಾಶ್ಮೀರ ನಮ್ಮದು ಎನ್ನುವುದಿಲ್ಲ, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯಿ ಚಿನ್ ಪ್ರದೇಶವೂ ನಮ್ಮದೇ ಎಂದು ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕಾನೂನು ರೂಪಿಸಲು ಸಂಸತ್ತು ಪೂರ್ಣ ಹಕ್ಕಿದೆ ಎಂದು ಗೃಹ ಸಚಿವ ಅಮಿತ್ ಶಾ ಇದೇ ವೇಳೆ ಕೆಳಮನೆಯಲ್ಲಿ ಹೇಳಿದ್ದಾರೆ.
ಅಮಿತ್ ಶಾ ಮಾತಿಗೆ ಅಪಸ್ವರ ಎತ್ತಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಭಾರತೀಯ ಸಂವಿಧಾನ 370ನೇ ವಿಧಿ ಮಾತ್ರ ಹೊಂದಿಲ್ಲ, 371ನೇ ವಿಧಿ ಸಹ ಇದೆ. ಆ ವಿಧಿಯ ಪ್ರಕಾರ ನಾಗಾಲ್ಯಾಂಡ್,ಅಸ್ಸೋಂ, ಮಣಿಪುರ, ಸಿಕ್ಕಿಂ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುತ್ತದೆ. 370 ವಿಧಿ ತೆರವು ಮೂಲಕ ಯಾವ ಸಂದೇಶವನ್ನು ನೀಡಲಿ ಹೊರಟಿದ್ದೀರಾ ಎಂದು ಮನೀಷ್ ತಿವಾರಿ ಪ್ರಶ್ನೆ ಮಾಡಿದ್ದಾರೆ.
ಇಂದು 370ನೇ ವಿಧಿ ರದ್ದು, ನಾಳೆ 317ನೇ ವಿಧಿ ರದ್ದು ಮಾಡುತ್ತೀರಾ..? ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ 371ನೇ ವಿಧಿಯನ್ನು ರದ್ದು ಮಾಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಮನೀಷ್ ತಿವಾರಿ ವ್ಯಂಗ್ಯ ಮಾಡಿದ್ದಾರೆ.