ನವದೆಹಲಿ:ಜಲ ಜೀವನ್ ಮಿಷನ್ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಸರ್ಪಂಚ್ಗಳು ಮತ್ತು ಗ್ರಾಮಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಗ್ರಾಮ ಸಮುದಾಯದ ಮುಖಂಡರ ಸಹಾಯದಿಂದ ಜಲ ಜೀವನ್ ಮಿಷನ್ನ ಗುರಿಯನ್ನು ಸಂಪೂರ್ಣವಾಗಿ ಸಾಧಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಲ್ ಜೀವನ್ ಮಿಷನ್ಅನ್ನು ಜನರ ಆಂದೋಲನವನ್ನಾಗಿ ಮಾಡುವಂತೆ ಜನರು ಮತ್ತು ಗ್ರಾಮ ಪಂಚಾಯಿತಿಗಳಿಗೆ ಮೋದಿ ಮನವಿ ಮಾಡಿದ್ದಾರೆ. 2024ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಜೆಜೆಎಂ ಹೊಂದಿದೆ.
ಜಲ ಜೀವನ್ ಮಿಷನ್ (ಜೆಜೆಎಂ)ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಸೆಪ್ಟೆಂಬರ್ 29ರಂದು ಪತ್ರದ ಮೂಲಕ ದೇಶದ ಎಲ್ಲಾ ಸರ್ಪಂಚ್, ಗ್ರಾಮ ಪ್ರಧಾನ್ಗಳಿಗೆ ಪತ್ರ ಬರೆದಿದ್ದಾರೆ. ಮಿಷನ್- ಹರ್ ಘರ್ ಜಲದ ಗುರಿಯನ್ನು ಸಂಪೂರ್ಣವಾಗಿ ಸಾಧಿಸಬಹುದು. ಎಲ್ಲಾ ಸರ್ಪಂಚ್, ಪ್ರಧಾನರು, ಗ್ರಾಮ ಸಮುದಾಯದ ಮುಖಂಡರು ಅದರ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಜಲ ಶಕ್ತಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಮಿಷನ್ ನೀರು ಸರಬರಾಜಿನ ಸಮಸ್ಯೆಯನ್ನು ಪರಿಹರಿಸುವುದಲ್ಲದೆ, ನೀರಿನಿಂದ ಹರಡುವ ರೋಗಗಳಾದ ಕಾಲರಾ, ಭೇದಿ, ಅತಿಸಾರ, ಎನ್ಸೆಫಾಲೈಟಿಸ್ ಮತ್ತು ಟೈಫಾಯಿಡ್ ನಿಭಾಯಿಸಲು ಸಹಕಾರಿಯಾಗುತ್ತದೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
ಅಲ್ಲದೆ ಜಾನುವಾರುಗಳಿಗೆ ಸುರಕ್ಷಿತ ಮತ್ತು ಶುದ್ಧ ನೀರನ್ನು ಒದಗಿಸಿದಾಗ ಗ್ರಾಮಗಳ ಜನರ ಆರೋಗ್ಯ ಸುಧಾರಿಸುವುದಲ್ಲದೆ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರಿಂದಾಗಿ ಕುಟುಂಬಗಳ ಆದಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.