ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಈಗಾಗಲೇ ದೇಶದಲ್ಲಿ ಕೆಲವೊಂದು ಷರತ್ತುಗಳೊಂದಿಗೆ 3.0 ಲಾಕ್ಡೌನ್ ಮುಂದುವರಿದಿದ್ದು, ಮೇ.17ಕ್ಕೆ ಅದು ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿರುವ ಸಭೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ 5ನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಿತಿ-ಗತಿ, ಲಾಕ್ಡೌನ್ ಮುಂದೂಡಿಕೆ, ಆರ್ಥಿಕ ಚಟುವಟಿಕೆ ಪುನಾರಂಭ, ದೇಶದಲ್ಲಿ ಲಾಕ್ಡೌನ್ ಮುಗಿದ ಬಳಿಕ ತೆಗೆದುಕೊಳ್ಳುವ ಮುಂದಿನ ಹಂತಗಳು ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಪ್ರಮುಖವಾಗಿ ಲಾಕ್ಡೌನ್ ಸಡಿಲಿಕೆ ನಂತರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯಾ? ಸಡಿಲಿಕೆಯಿಂದ ಸಮಸ್ಯೆ ಆಗಿದೆಯಾ? ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ನಂತರದ ಸ್ಥಿತಿಗತಿ, ರೆಡ್ಜೋನ್ ಹಾಗು ಕಂಟೈನ್ಮೆಂಟ್ ವಲಯದ ನಿಯಂತ್ರಣ, ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ, ಕೋವಿಡ್ ನಿಯಂತ್ರಣ ಪ್ರಮಾಣ ಸೇರಿದಂತೆ ಸವಿಸ್ತಾರವಾಗಿ ಮಾತುಕತೆ ನಡೆಸಲಿದ್ದಾರೆ.