ನವದೆಹಲಿ:ಸಂಸತ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಅನೇಕ ಕ್ಷೇತ್ರಗಳ ಮೇಲೆ ತಮ್ಮ ದೂರ ದೃಷ್ಠಿ ಹಾಯಿಸಿದ್ದಾರೆ. ಸೀತಾರಾಮನ್ ಅವರ ಬಜೆಟ್ಗೆ ಪ್ರಧಾನಿ ಮೋದಿ ಶಹಬ್ಬಾಸ್ಗಿರಿ ನೀಡಿದ್ದಾರೆ.
ನವ ಭಾರತ ನಿರ್ಮಾಣವೇ ನಮ್ಮ ಗುರಿ... ಅದಕ್ಕೇನು ಬೇಕೋ ಎಲ್ಲವೂ ಈ ಬಜೆಟ್ನಲ್ಲಿದೆ... ಮೋದಿ ಪ್ರಶಂಸೆ - ಪ್ರಧಾನಿ ಮೋದಿ
ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಬಜೆಟ್ಗೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸ್ಗಿರಿ ನೀಡಿದ್ದು, ಮುಂದಿನ ಪೀಳಿಗೆ ಗಮನದಲ್ಲಿಟ್ಟುಕೊಂಡು ವಿತ್ತ ಸಚಿವರು ಮಂಡಿಸಿರುವ ಬಜೆಟ್ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಬಜೆಟ್ ಮುಕ್ತಾಯಗೊಂಡ ಬಳಿಕ ಮಾತನಾಡಿದ ಮೋದಿ, ಬಜೆಟ್ನಿಂದ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು, ಆತ್ಮವಿಶ್ವಾಸದಿಂದ ಕೂಡಿರುವ ಬಜೆಟ್ ಇದಾಗಿದೆ ಎಂದರು. ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣಲಿದ್ದು, ದೇಶದ ಬೆನ್ನೆಲುಬು ಆಗಿರುವ ರೈತರ ಹಿತದೃಷ್ಟಿ ಇದರಲ್ಲಿದೆ ಎಂದಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆತ್ಮವಿಶ್ವಾಸದಿಂದ ಕೂಡಿದ್ದು, ಬಸವೇಶ್ವರ ಅವರ ಕಾಯಕವೇ ಕೈಲಾಸ ಮಂತ್ರ ಜಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದು ಕೇವಲ ಬಜೆಟ್ ಅಲ್ಲ ಗ್ರೀನ್ ಬಜೆಟ್ ಆಗಿದ್ದು, ನವಭಾರತ ನಿರ್ಮಾಣಕ್ಕೆ ಈ ಬಜೆಟ್ ಸಹಕಾರಿಯಾಗಲಿದೆ. ಜನರ ಆಸೆ,ಆಕಾಂಕ್ಷೆ,ಭರವಸೆ ಈಡೇರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂದಿನ ಪೀಳಿಗೆ ಬಗ್ಗೆ ಸಹ ಇದರಲ್ಲಿ ಗಮನ ಹರಿಸಲಾಗಿದೆ. ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಅವರು ಹೇಳಿದರು.