ನವದೆಹಲಿ: ಗಡಿಯಲ್ಲಿ ಬಿಕ್ಕಟ್ಟು ಮೂಡಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಜನರಿಗೆ ಅವರ ರಾಷ್ಟ್ರೀಯ ದಿನದ ಶುಭಾಶಯ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಪ್ರಧಾನಿ ಮೋದಿ ಅವರು ಪಾಕ್ ರಾಷ್ಟ್ರೀಯ ದಿನದ ಶುಭಾಶಯ ತಿಳಿಸಿ, ಅಭಿವೃದ್ಧಿ, ಶಾಂತಿಗಾಗಿ ಒಟ್ಟಿಗೆ ಶ್ರಮಿಸುವ ಕುರಿತು ಸಂದೇಶ ಕಳುಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಈ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟ್ವೀಟ್ ಮಾಡಿ, ಭಾರತದ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿ ಮೆಸೇಜ್ ಕಳಿಸಿದ್ದಾರೆ ಎಂದಿದ್ದಾರೆ.
'ರಾಷ್ಟ್ರೀಯ ದಿನಕ್ಕೆ ಪಾಕ್ ಜನರಿಗೆ ಶುಭಾಶಯ. ಹಿಂಸೆ, ಭಯೋತ್ಪಾದನೆ ಮುಕ್ತ ವಾತಾವರಣದಲ್ಲಿ ಪ್ರಜಾಪ್ರಭುತ್ವ, ಶಾಂತಿ ಹಾಗೂ ಸಮೃದ್ಧಿಗಾಗಿ ಒಟ್ಟಿಗೆ ಶ್ರಮಿಸಬೇಕಿದೆ ಎಂದು ಮೋದಿ ಸಂದೇಶ ಕಳುಹಿಸಿದ್ದಾರೆ' ಎಂದು ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇನ್ನು ಮೋದಿ ಅವರ ಸಂದೇಶವನ್ನು ಸ್ವಾಗತಿಸಿರುವ ಇಮ್ರಾನ್ ಖಾನ್, ಭಾರತದ ಜೊತೆ ಸಮಗ್ರ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕಾಲ ಬಂದಿದೆ. ಜನರ ಅಭಿವೃದ್ಧಿ ಹಾಗೂ ಶಾಂತಿಗಾಗಿ ಉಭಯ ದೇಶಗಳ ಮಧ್ಯೆ ಹೊಸ ಬಾಂಧವ್ಯ ಮೂಡಬೇಕಿದೆ ಎಂದು ಹೇಳಿದ್ದಾರೆ.
ಲಾಹೋರ್ ರೆಸಲ್ಯೂಷನ್ ನೆನಪಿಗಾಗಿ ಪಾಕ್ ಪ್ರತಿ ವರ್ಷ ಮಾರ್ಚ್ 23 ರಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತದೆ. ಅಂತೆಯೇ ಶುಕ್ರವಾರ ದೆಹಲಿಯಲ್ಲಿ ಪಾಕಿಸ್ತಾನ ಹೈಕಮಿಷನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದ್ರೆ ಭಾರತದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.