ನ್ಯೂಯಾರ್ಕ್(ಯುಎಸ್ಎ):ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 50 ಕಿಲೋವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್ಅನ್ನು ಮಂಗಳವಾರ ಉದ್ಘಾಟನೆ ಮಾಡಿದರು.
ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ 'ಸಮಕಾಲೀನ ಜಗತ್ತಿನಲ್ಲಿ ಮಹಾತ್ಮಾ ಗಾಂಧಿಯ ಪ್ರಸ್ತುತತೆ' ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರೊಂದಿಗೆ ಮೋದಿ, ಮಹಾತ್ಮ ಗಾಂಧಿಯವರ ವಿಶ್ವಸಂಸ್ಥೆಯ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್-ಜೇ-ಇನ್ ಹಾಜರಿದ್ದರು.
ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದಿನ ಜಗತ್ತಿನಲ್ಲಿ ಗಾಂಧಿವಾದದ ಆಲೋಚನೆಗಳು ಮತ್ತು ಮೌಲ್ಯಗಳ ನಿರಂತರ ಪ್ರಸ್ತುತತೆಯನ್ನು ಒತ್ತಿ ಹೇಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗಾಂಧೀಜಿ ಜೀವನ ಇಡೀ ಜಗತ್ತಿಗೆ ಸ್ಫೂರ್ತಿಯ ಮೂಲ:ಮಹಾತ್ಮ ಗಾಂಧಿ ತಮ್ಮ ಜೀವನದಿಂದ ಪ್ರಭಾವ ಬೀರಲು ಯಾವತ್ತೂ ಪ್ರಯತ್ನಿಸಲಿಲ್ಲ. ಆದರೆ ಅವರ ಜೀವನ ಇಡೀ ಜಗತ್ತಿಗೇ ಸ್ಫೂರ್ತಿಯ ಮೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಮಕಾಲೀನ ಜಗತ್ತಿನಲ್ಲಿ ಮಹಾತ್ಮ ಗಾಂಧಿಯವರ ಪ್ರಸ್ತುತತೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹೇಗೆ ಪ್ರಭಾವ ಬೀರಬೇಕು ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಹೇಗೆ ಸ್ಫೂರ್ತಿ ತುಂಬಬೇಕು ಎಂಬುದು ಗಾಂದೀಜಿಯವರ ದೃಷ್ಟಿಕೋನವಾಗಿತ್ತು ಎಂದರು.
ಭಾರತಕ್ಕೆ ಗಾಂಧೀಜಿ ಅವರ ಕೊಡುಗೆ ಅಪಾರವಾಗಿದೆ. ಅಲ್ಲದೆ ಅವರು ಪ್ರಜಾಪ್ರಭುತ್ವದ ಶಕ್ತಿಯನ್ನು ಅರಿತಿದ್ದರು ಎಂದು ಒತ್ತಿ ಹೇಳಿದರು. ಗಾಂಧೀಜಿ ಭಾರತೀಯನಾಗಿ ಭಾರತಕ್ಕಷ್ಟೇ ಸೀಮಿತವಾಗಿರಲಿಲ್ಲ. ಸರ್ಕಾರದ ಮೇಲೆ ಅವಲಂಬಿತರಾಗದೆ ಹೇಗೆ ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದನ್ನು ಗಾಂಧೀಜಿ ಜನರಿಗೆ ಹೇಳಿಕೊಟ್ಟಿದ್ದಾರೆ. ತಮ್ಮನ್ನು ಕಾಣದ ಜನರನ್ನೂ ಕೂಡಾ ಗಾಂಧೀಜಿ ಪ್ರಭಾವಿಸಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲಾ ಅವರ ನೀತಿಗಳು ಮತ್ತು ಸಿದ್ಧಾಂತಗಳು ಗಾಂಧೀಜಿ ಅವರ ದೃಷ್ಟಿಕೋನವನ್ನೇ ಅವಲಂಬಿಸಿವೆ ಎಂದರು.