ಮೀರತ್:ಕಾಂಗ್ರೆಸ್ ಅನ್ನು ದೇಶದಿಂದ ಕಿತ್ತೊಗೆಯಿರಿ ಬಡತನ ತನ್ನಿಂದ ತಾನೇ ನಿರ್ಮೂಲನೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಮೀರತ್ನಲ್ಲಿ ಮಾತನಾಡಿದ ಅವರು, ಐದು ವರ್ಷದ ಹಿಂದೆ ನಾನು ಇಲ್ಲಿಗೆ ಬಂದಾಗ ಆಶೀರ್ವದಿಸಿದ್ದಿರಿ.. ಮತ್ತೆ ನಿಮ್ಮ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ ಎಂದರು.
ಉತ್ತರಪ್ರದೇಶದ ಮೀರತ್ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾನು ಕೊಟ್ಟ ಭರವಸೆ ಈಡೇರಿಸಿದ್ದೇನೆ. ಬಾಕಿ ಅಭಿವೃದ್ಧಿ ಕೆಲಸವನ್ನ ಮಾಡುತ್ತೇನೆ, ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾರೆ. ನೆಹರೂ ಹಾಗೂ ಇಂದಿರಾ ಗಾಂಧಿ ಗರೀಬಿ ಹಠಾವೋ ಬಗ್ಗೆ ಆಗಲೇ ಮಾತನಾಡಿದ್ದರು. ಆದರೆ ಈಗಲೂ ದೇಶ ಬಡತನದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಆಗ ನೀಡಿದ್ದ ಸುಳ್ಳು ಭರವಸೆಗಳನ್ನ ಈಗಲೂ ಕಾಂಗ್ರೆಸ್ ನೀಡುತ್ತಿದೆ ಎಂದು ಹರಿಹಾಯ್ದರು.
ಆದರೆ ನಾವು ಬಡತನ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಇದಕ್ಕೆ ಸಮಯಾವಕಾಶ ಬೇಕು ಎಂದು ಮೋದಿ ಜನರ ಬಳಿ ಸಮಯಾವಕಾಶ ಕೇಳಿದರು.
ಇದೇ ವೇಳೆ, ಡಿಆರ್ಡಿಒ ಸಾಧನೆ ಬಗ್ಗೆ ಹಾಗೂ ಮೋದಿ ಮಾಡಿದ ಭಾಷಣದ ಬಗ್ಗೆ ಟೀಕಿಸಿದ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಟೀಕೆಗೂ ಪ್ರಧಾನಿ ತಿರುಗೇಟು ನೀಡಿದರು.