ನವದೆಹಲಿ:ಮುಂದಿನ ವಾರ ಬಾಂಗ್ಲಾ ಪ್ರವಾಸ ಕೈಗೊಳ್ಳಬೇಕಿದ್ದ ಪ್ರಧಾನಿ ಮೋದಿ, ಕೊರೊನಾ ವೈರಸ್ ಭೀತಿಯಿಂದ ಪ್ರವಾಸ ರದ್ದುಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಬಾಂಗ್ಲಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ ಮೂರು ಜನರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಮಾರ್ಚ್ 17ರಂದು ನಡೆಯಬೇಕಿದ್ದ ಬಾಂಗ್ಲಾದೇಶದ ಸ್ಥಾಪಕ 'ಬಂಗಬಂಧು' ಎಂದು ಕರೆಯಲ್ಪಡುವ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಕಳೆದ ಮೂರು ದಿನದ ಹಿಂದೆಯಷ್ಟೇ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪ್ರಧಾನಿ ಮೋದಿ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆದರೆ, ಬಾಂಗ್ಲಾದೇಶದಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಮೋದಿ ತಮ್ಮ ಪ್ರವಾಸ ರದ್ದು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾ, ಇಟಲಿ, ದಕ್ಷಿಣ ಕೊರಿಯಾ, ಸಿಂಗಾಪುರ್, ಇರಾನ್ ಮತ್ತು ಥೈಲ್ಯಾಂಡ್ ಸೇರಿದಂತೆ ಆರು ದೇಶಗಳಿಂದ ಹಿಂದಿರುಗುತ್ತಿರುವ ಬಾಂಗ್ಲಾದೇಶಿಗರು 14 ದಿನಗಳ ಕಾಲ ಸಂಪರ್ಕದಲ್ಲಿರಬೇಕು ಎಂದು ಸರ್ಕಾರ ಒತ್ತಾಯಿಸಿದೆ.
ಈ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನರ್‌ಗಳ ಮೂಲಕ ಪರೀಕ್ಷಿಸಲಾಗುತ್ತಿದೆ ಎಂದು ಢಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ ಮೊಹಮ್ಮದ್ ಶಹರಿಯಾರ್ ಸಾಜಾದ್ ಹೇಳಿದ್ದಾರೆ.