ಮಹಾಬಲಿಪುರಂ: ನಿನ್ನೆ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಮಾರ್ಗಗಳು ಮತ್ತು ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆಯನ್ನು ಚರ್ಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಕೆ. ಗೋಖಲೆ, ಇಬ್ಬರು ನಾಯಕರು ತಮ್ಮ ರಾಷ್ಟ್ರದ ದೃಷ್ಟಿಕೋನಗಳು ಮತ್ತು ಅವರ ಸರ್ಕಾರದ ಆದ್ಯತೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿದ್ದಾರೆ.
ಅಭಿವೃದ್ಧಿ ಕುರಿತ ಆದ್ಯತೆಗಳು, ವ್ಯಾಪಾರ ಸಂಬಂಧಿತ ವಿಷಯಗಳು ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಯಾವುದರ ಮೇಲೆ ಉಭಯ ದೇಶಗಳು ಬಂಡವಾಳ ಹೂಡಬೇಕು, ಈ ಮೂಲಕ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧವನ್ನ ವೃದ್ಧಿಸುವ ಕುರಿತು ಚರ್ಚೆಗಳು ನಡೆದಿವೆ.
ಇತ್ತೀಚೆಗೆ ಎರಡನೇ ಅವಧಿಗೆ ಮರು ಆಯ್ಕೆಯಾದ ನಂತರ ಆರ್ಥಿಕ ಅಭಿವೃದ್ಧಿಗೆ ಹೊಸ ಆದೇಶವನ್ನು ಸ್ವೀಕರಿಸಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇನ್ನು ಮೋದಿ ಅವರ ಮುಂದಿನ ನಾಲ್ಕುವರೆ ವರ್ಷದ ಆಡಳಿತ ಅವಧಿಯಲ್ಲಿ ಉತ್ತಮ ಸಹಕಾರ ನೀಡೋದಾಗಿ ಕ್ಸಿ ಜಿನ್‌ಪಿಂಗ್ ಭರವಸೆ ನೀಡಿದ್ದಾರೆ ಎಂದು ಕೆ. ಗೋಖಲೆ ಮಾಹಿತಿ ನೀಡಿದ್ದಾರೆ.