ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಯಾವ ವಲಯಗಳಿಗೆ ಎಷ್ಟು ಹಣ ಎಂಬ ಬಗ್ಗೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಇಂದಿನ ಸುದ್ದಿಗೋಷ್ಠಿಯಲ್ಲಿ ಸಣ್ಣ ಉದ್ದಿಮೆ, ಬ್ಯಾಂಕಿಂಗ್, ಆದಾಯ ತೆರಿಗೆ, ಪಿಎಫ್ ಬಗ್ಗೆ ಅವರು ಮಾತನಾಡಿದ್ದು, ಸಣ್ಣ,ಅತಿಸಣ್ಣ ಹಾಗೂ ಮಧ್ಯಮ ವಲಯದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡಿದರು.
ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಹಣಕಾಸು ಸಚಿವರು ಮಾಡಿರುವ ಸುದ್ದಿಗೋಷ್ಠಿಯಲ್ಲಿನ ಅಂಶಗಳು ಎಂಎಸ್‌ಎಂಇ ವಲಯದ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಲಿದ್ದು, ಘೋಷಣೆ ಮಾಡಿರುವ ಯೋಜನೆಗಳಿಂದ ಸಣ್ಣ ಕೈಗಾರಿಕಗಳ ಉತ್ಪಾದನೆ ಹೆಚ್ಚಾಗುವುದರ ಜತೆಗೆ ಅವು ಬಲಿಷ್ಠವಾಗಲಿವೆ ಎಂದಿರುವ ಅವರು, ಉದ್ಯಮಿಗಳನ್ನ ಸದೃಢರನ್ನಾಗಿಸಿ, ಸ್ಪರ್ಧಾತ್ಮಕವಾಗಿ ಕೆಲಸ ಮಾಡುವ ಮನೋಬಲ ಹೆಚ್ಚಿಸುತ್ತದೆ ಎಂದಿದ್ದಾರೆ.
ದೇಶದಲ್ಲಿರುವ MSMEಗಳಿಗೆ ಯಾವುದೇ ಷರತ್ತು ಇಲ್ಲದೇ ಸಾಲ ಕೊಡಲು ನಿರ್ಧರಿಸಲಾಗಿದೆ. ಇದರಿಂದ 45 ಲಕ್ಷ ಎಂಎಸ್‌ಎಂಇ ಕೈಗಾರಿಕೆಗಳಿಗೆ ಲಾಭವಾಗಲಿದೆ. ದೇಶದಲ್ಲಿ 25 -100 ಕೋಟಿ ವಹಿವಾಟುಗಳಿರುವ ಸಣ್ಣ ಕಂಪನಿಗಳಿಗೆ ಇದರಿಂದಾಗಿ ನೆರವು ಜತೆಗೆ MSMEಗಳಿಗೆ ಆರು ಪ್ರಮುಖ ರಿಲೀಫ್‌ಗಳನ್ನ ನೀಡಲಾಗಿದೆ ಎಂದರು. ಸಾಲ ಮರುಪಾವತಿಗೆ ನಾಲ್ಕು ವರ್ಷದ ಕಾಲಾವಕಾಶವನ್ನ ಕೇಂದ್ರ ಸರ್ಕಾರ ನೀಡಿದೆ. ಸಾಲಕ್ಕೆ ಮೊದಲ 12 ತಿಂಗಳವರೆಗೂ ಯಾವುದೇ ಕಂತುಗಳನ್ನ ಕಟ್ಟಬೇಕಾಗಿಲ್ಲ. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಶ್ಯೂರಿಟಿಯಾಗಲಿದೆ ಎಂದು ಅವರು ತಿಳಿಸಿದ್ದು, 3 ಲಕ್ಷ ಕೋಟಿವರೆಗೆ ಯಾವುದೇ ಜಾಮೀನು ಇಲ್ಲದೇ ಸಾಲ ನೀಡಲು ನಿರ್ಧರಿಸಲಾಗಿದೆ.