ನವದೆಹಲಿ: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 'ಅಟಲ್ ಬಿಹಾರಿ ವಾಜಪೇಯಿ' ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಈ ಪುಸ್ತಕವು ವಾಜಪೇಯಿ ಅವರ ರಾಜಕೀಯ ಚಿಂತನೆಗಳು, ಸಾಧನೆಗಳ ಜೊತೆಗೆ ಅವರ ಜೀವನ ಮತ್ತು ಸಂಸತ್ತಿನಲ್ಲಿ ಅವರು ಮಾಡಿರುವ ಗಮನಾರ್ಹ ಭಾಷಣಗಳನ್ನು ಒಳಗೊಂಡಿದೆ. ಪುಸ್ತಕವನ್ನು ಶಕ್ತಿ ಸಿನ್ಹಾ ಅವರು ಬರೆದಿದ್ದಾರೆ. 300 ಪುಟಗಳ ಈ ಪುಸ್ತಕವನ್ನು ಪೆಂಗ್ವಿನ್ ಸಂಸ್ಥೆ ಪ್ರಕಟಿಸಿದೆ.
ಇಂದು ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ, ಪುಸ್ತಕವನ್ನು ಸಂಸತ್ನಲ್ಲಿ ಬಿಡುಗಡೆ ಮಾಡಲಿದ್ದಾರೆ. ವಾಜಪೇಯಿ ಅವರು ಉತ್ತಮ ರಾಜಕಾರಣಿ ಮತ್ತು ವಿಶ್ವ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದರು. ಲೋಕಸಭೆಗೆ 10 ಬಾರಿ ಮತ್ತು ರಾಜ್ಯಸಭೆಗೆ ಎರಡು ಬಾರಿ ಚುನಾಯಿತರಾದ ಅವರು, ಜನರ ಪ್ರೀತಿ, ವಾತ್ಸಲ್ಯ ಮತ್ತು ನಂಬಿಕೆ ಗಳಿಸಿದ್ದರು.
ರಾಷ್ಟ್ರಕ್ಕೆ ಅವರು ನೀಡಿರುವ ಅಸಾಧಾರಣ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ 2015ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ವನ್ನು ನೀಡಲಾಯಿತು. ಇದಕ್ಕೂ ಮುನ್ನ ರಾಷ್ಟ್ರದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸಹ ಪಡೆದಿದ್ದರು.
1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ಅವರು ಆಗಸ್ಟ್ 16, 2018ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.