ಅಯೋಧ್ಯೆ (ಉತ್ತರ ಪ್ರದೇಶ):ರಾಮಮಂದಿರ ಶಿಲಾನ್ಯಾಸಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆಗೆ ಸಮೀಪವಿರುವ ಹನುಮಾನ್ ಗರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಸುಮಾರು 7 ನಿಮಿಷಗಳ ಕಾಲ ಪ್ರದಾನಿ ದೇಗುಲದಲ್ಲಿರಲಿದ್ದು, ಈ ವೇಳೆ ತಮ್ಮ ಆರೋಗ್ಯಾಭಿವೃದ್ಧಿ ಹಾಗೂ ದೇಶದಿಂದ ಕೊರೊನಾವನ್ನು ಮುಕ್ತ ಮಾಡುವ ಸಲುವಾಗಿ ವೇದ ಮಂತ್ರಗಳ ಪಠಣ ಕಾರ್ಯಕ್ರಮ ನಡೆಯಲಿದೆ.
ಹನುಮಾನ್ಗರಿ ದೇವಾಲಯದ ಅರ್ಚಕ ಮಹಾಂತ್ ರಾಜು ಮಾತನಾಡಿ, 'ದೇವಾಲಯಕ್ಕೆ ಪ್ರಧಾನಿಗಳು ಭೇಟಿ ನೀಡಿದರೆ ಸುಮಾರು 7 ನಿಮಿಷಗಳ ಕಾಲ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಅವರ ಆರೋಗ್ಯಕ್ಕೆ ವಿಶೇಷ ಮಂತ್ರಗಳನ್ನು ಪಠಿಸಲಾಗುತ್ತದೆ' ಎಂದು ತಿಳಿಸಿದರು.
ದೇಗುಲದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಕಚೇರಿಯಿಂದ ಆದೇಶಿಸಲಾಗಿದೆ. ಈ ವೇಳೆ ಪ್ರಧಾನಿಯನ್ನು ಸ್ಪರ್ಶಿಸಲು ಹಾಗೂ ಪ್ರಸಾದ ನೀಡಲು ಅವಕಾಶವಿರುವುದಿಲ್ಲ ಎಂದು ಮಹಾಂತ್ ರಾಜು ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಗಳ ಅನ್ವಯ, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಪ್ರಧಾನಿ ಶಿಲಾನ್ಯಾಸ ನೆರವೇರುತ್ತಿದ್ದು, ಈ ವೇಳೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.