ನವದೆಹಲಿ:ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ. ಇದರಿಂದ 2024 ರ ಚುನಾವಣೆಯಲ್ಲಿ ನೀವು ನನ್ನ ಹೆಸರಿನ ಮೇಲೆ ಅವಲಂಬಿಸಬೇಕಾದ ಅಗತ್ಯ ಬರುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ಎಂಪಿಗಳಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ನಡೆದ ಬಿಜೆಪಿಯ ನೂತನ ಸಂಸದರ ಕಾರ್ಯಾಗಾರದ ಕುರಿತು ತಮ್ಮ ಅಭಿಪ್ರಾಯವನ್ನು ಬರೆಯುವಾಗ ಭಾರತದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪೂರ್ವ ದೆಹಲಿಯ ಸಂಸದ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.
ಭಾರತ ಅಪ್ರತಿಮ ಸಂಸ್ಕ್ರತಿ ಹಾಗೂ ಮಾನವ ಸಂಪನ್ಮೂಲಗಳನ್ನು ಹೊಂದಿರುವ ದೇಶ. ಈ ದೇಶವನ್ನು ಇನ್ನಷ್ಟು ಪ್ರೌಢ ದೇಶವನ್ನಾಗಿಸುವ ಕೆಲಸ ಹಾಗೂ ಜವಾಬ್ದಾರಿ ನಿಮ್ಮ ಕೈಯಲ್ಲಿದೆ. ಮುಂದಿನ ನಾಲ್ಕೂವರೆ ವರ್ಷಗಳಿಗಿಂತಲೂ ಹೆಚ್ಚಿನ ಸಮಯಕ್ಕೆ ನೀವು ಸಂಸದರಾಗಿ ಆಯ್ಕೆಯಾಗಿದ್ದೀರಿ. ನಿಮ್ಮ ಕ್ಷೇತ್ರಗಳಿಗಾಗಿ ಕೆಲಸ ಮಾಡಲು ಇನ್ನೂ ಬಹಳಷ್ಟು ಸಮಯವಿದೆ. ಆದಷ್ಟು ಬೇಗ ನಿಮ್ಮ ಜವಾಬ್ದಾರಿ ಪೂರೈಸಿ. ನಿಮ್ಮ ಕ್ಷೇತ್ರಗಳಿಗಾಗಿ, ನಿಮ್ಮ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ನೀವು ನನ್ನ ಹೆಸರನ್ನು ಹೇಳಿ ಚುನಾವಣೆ ಎದುರಿಸುವ ಅನಿವಾರ್ಯತೆ ಬರುವುದಿಲ್ಲ ಎಂದು ಮೋದಿ ಹೇಳಿಕೆಯನ್ನು ಗಂಭೀರ್ ಉದ್ಘರಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ, ಸಂಸದರು ತಮ್ಮ ಆರೋಗ್ಯ ಮತ್ತು ಕುಟುಂಬದ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಬೇಕು. ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ತಂಡವಾಗಿ ಕೆಲಸ ನಿರ್ವಹಿಸುವಂತೆ ಮೋದಿ ಹೇಳಿದ್ದಾರೆ ಎಂದು ಗಂಭೀರ್ ಬರೆದಿದ್ದಾರೆ.