ನವದೆಹಲಿ:ದೇಶಾದ್ಯಂತ ಕೊರೊನಾ ಲಸಿಕೆಯ ಎರಡನೇ ಹಂತದ ಡ್ರೈರನ್ ಇಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಕೊರೊನಾ ಲಸಿಕೆ ಹಂಚಿಕೆಗೆ ಸಿದ್ಧತೆ: ಸೋಮವಾರ ಎಲ್ಲ ರಾಜ್ಯದ ಸಿಎಂಗಳೊಂದಿಗೆ ಪ್ರಧಾನಿ ಸಂವಾದ - ಎಲ್ಲ ರಾಜ್ಯದ ಸಿಎಂಗಳೊಂದಿಗೆ ನಮೋ ಸಭೆ
ವಿವಿಧ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕೆ ಹಂಚಿಕೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಸೋಮವಾರ ಎಲ್ಲ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಲಿದ್ದಾರೆ.
ಸೋಮವಾರ ಸಂಜೆ 4ಗಂಟೆಗೆ ಈ ಸಭೆ ನಡೆಯಲಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸೇರಿದಂತೆ ಕೆಲ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಕೋವಿಡ್ ವ್ಯಾಕ್ಸಿನ್ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಎಲ್ಲ ರಾಜ್ಯಗಳಿಗೂ ಹಂಚಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.
ಮೊದಲ ಹಂತದಲ್ಲಿ ದೇಶದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿವಿಧ ರಾಜ್ಯಗಳಿಂದ ಲಸಿಕೆಯ ಬೇಡಿಕೆ, ಪೂರೈಕೆ, ಲಸಿಕೆ ಕೊಡಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಪ್ರಧಾನಿ ಚರ್ಚಿಸಲಿದ್ದಾರೆ.