ನವದೆಹಲಿ:ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್‌ಡೌನ್ ಮುಕ್ತಾಯಗೊಳ್ಳಲು ಇನ್ನು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಲಾಕ್‌ಡೌನ್ ವಿಸ್ತರಣೆ ಕುರಿತಾಗಿ ವಿಡಿಯೋ ಸಂವಾದ ಮೂಲಕ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಲಾಕ್‌ಡೌನ್ ಅವಧಿ ಮುಕ್ತಾಯದ ಬಳಿಕ ಮುಂದಿನ ನಡೆಯೇನು? ಎಂಬುದರ ಬಗ್ಗೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ, ರಾಜ್ಯಗಳ ಸದ್ಯದ ಪರಿಸ್ಥಿತಿಯ ಅವಲೋಕನವೂ ನಡೆಯಲಿದೆ.
ಒಡಿಶಾ ಹಾಗೂ ಪಂಜಾಬ್ ರಾಜ್ಯಗಳು ಏಪ್ರಿಲ್ 30ರವರೆಗೆ ಲಾಕ್‌ಡೌನ್ ವಿಸ್ತರಿಸಿವೆ. ಬಹುತೇಕ ಎಲ್ಲ ರಾಜ್ಯಗಳ ಸಿಎಂಗಳೂ ಕೂಡಾ ಇದೇ ನಿರ್ಧಾರವನ್ನು ತಾಳಿದ್ದಾರೆ. ಈ ವಿಡಿಯೋ ಸಂವಾದ ಮುಗಿದ ಬಳಿಕ ಸಂಜೆ ದೇಶವನ್ನುದ್ದೇಶಿಸಿ ಮೋದಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೇ ವಿವಿಧ ಪಕ್ಷದ ಮುಖಂಡರೊಂದಿಗೆ ಮಾತನಾಡಿರುವ ಮೋದಿ ಲಾಕ್‌ಡೌನ್ ನಂತರದ ನಿರ್ಧಾರವೇನು? ಎಂಬುದರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶೇ.80ರಷ್ಟು ನಾಯಕರು ಲಾಕ್‌ಡೌನ್ ಮುಂದುವರಿಕೆ ಅನಿವಾರ್ಯವೆಂಬ ಇಂಗಿತವನ್ನೇ ವ್ಯಕ್ತಪಡಿಸಿದ್ದರು.
ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 7,447 ದಾಟಿದೆ. 239 ಜನರು ಸಾವನ್ನಪ್ಪಿದ್ದಾರೆ. ಲಾಕ್‌ಡೌನ್ ಹೇರಿಕೆ ಮಾಡಿ 18 ದಿನಗಳು ಕಳೆದರೂ ಇಲ್ಲಿಯವರೆಗೆ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.