ಶಿಮ್ಲಾ: ರೋಹ್ಟಂಗ್ನಲ್ಲಿ 2000ರ ಜೂನ್ 3ರಂದು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಪಾಯ ಹಾಕಿದ್ದ ವಿಶ್ವದ ಅತಿ ಉದ್ದದ ಹೆದ್ದಾರಿ 'ಅಟಲ್ ಸುರಂಗ' ಕಾಮಗಾರಿ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ.
ಅಟಲ್ ಸುರಂಗವು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿಯ ಸುರಂಗವಾಗಿದೆ. 9.02 ಕಿ.ಮೀ. ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನು ವರ್ಷವಿಡೀ ಸಂಪರ್ಕಿಸಲಿದೆ.
ಈ ಸುರಂಗವನ್ನು ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ಅಲ್ಟ್ರಾ ಮಾಡರ್ನ್ ಸ್ಪೆಸಿಫಿಕೇಷನ್ಸ್ನಿಂದ ನಿರ್ಮಿಸಲಾಗಿದ್ದು, ಇದು ಸಮುದ್ರ ಮಟ್ಟದಿಂದ ಸರಾಸರಿ 3000 ಮೀಟರ್ ಎತ್ತರದಲ್ಲಿದೆ. ಈ ಸುರಂಗ ಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿಸಲಿದೆ.
ಅಟಲ್ ಸುರಂಗದ ದಕ್ಷಿಣ ಭಾಗದಲ್ಲಿ (ಎಸ್ಪಿ) ಮನಾಲಿಯಿಂದ 25 ಕಿ.ಮೀ. ದೂರದಲ್ಲಿ, 3060 ಮೀಟರ್ ಎತ್ತರದಲ್ಲಿದ್ದರೆ, ಉತ್ತರದ ಭಾಗದ (ಎನ್ಪಿ) ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು, 3071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ ಏಕ ಕೊಳವೆಯ ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗ ಒಳಗೊಂಡಿದೆ. 5.525 ಮೀಟರ್ ಎತ್ತರದವರೆಗಿನ ವಾಹನಗಳ ಸ್ಪಷ್ಟ ಓಡಾಟಕ್ಕೆ ಅವಕಾಶವಿದೆ.
ಸುರಂಗ 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಅಟಲ್ ಸುರಂಗವನ್ನು 3,000 ಕಾರುಗಳು ಮತ್ತು 1,500 ಟ್ರಕ್ಗಳು ನಿತ್ಯ, ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಓಡಾಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.
ರೋಹ್ಟಾಂಗ್ ಪಾಸ್ ಕೆಳಗೆ ವ್ಯೂಹಾತ್ಮಕ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ದ ಜೂನ್ 3ರಂದು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಗಿತ್ತು.