ಪಾಟ್ನಾ:ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ ಇಂದು 71 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮೂರು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ದರ್ಭಾಂಗ್, ಮುಜಾಫರ್ಪುರ್ ಹಾಗೂ ಪಾಟ್ನಾದಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ನಮೋ ಮತಯಾಚನೆ ನಡೆಸಲಿದ್ದಾರೆ. ಈ ಹಿಂದೆ ಅಕ್ಟೋಬರ್ 23ರಂದು ಸಸಾರಮ್, ಬಯಾ, ಭಗಲ್ಪುರ್ಗಳಲ್ಲಿ ನಮೋ ಪ್ರಚಾರ ಸಭೆ ನಡೆಸಿದ್ದರು.
ಬಿಹಾರದಲ್ಲಿಂದು ಮೊದಲ ಹಂತದ ವೋಟಿಂಗ್: 71 ಕ್ಷೇತ್ರಗಳ, 1,066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!
ಪ್ರಧಾನಿ ಮೋದಿ ಟ್ವೀಟ್
ತಾವು ಬಿಹಾರಕ್ಕೆ ತೆರಳುತ್ತಿರುವ ವಿಚಾರವಾಗಿ ಟ್ವೀಟ್ ಮಾಡಿರುವ ನಮೋ, ಮತ್ತೊಂದು ದಿನ ಬಿಹಾರಿ ಜನರ ನಡುವೆ ನಾನು ಇರಲಿದ್ದು, ಧರ್ಬಾಂಗ್, ಮುಜಾಫರ್ಪುರ್ ಹಾಗೂ ಪಾಟ್ನಾದಲ್ಲಿನ ರ‍್ಯಾಲಿಗಳಲ್ಲಿ ಭಾಗಿಯಾಗುತ್ತಿದ್ದು, ನೀವೂ ಇದರಲ್ಲಿ ಭಾಗಿಯಾಗಿ ಎಂದಿದ್ದಾರೆ.
ಇದರ ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಬಿಹಾರದಲ್ಲಿ ಇಂದು ಮಹಾಘಟಬಂಧನ್ ಉದ್ದೇಶಿಸಿ ಎರಡು ಪ್ರಚಾರ ಸಭೆ ನಡೆಸಲಿದ್ದಾರೆ. ವಾಲ್ಮಿಖಿ ನಗರ, ಧರ್ಬಾಂಗ್ನಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.
ಬಿಹಾರದ ಒಟ್ಟು 243 ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನವಾಗಲಿದೆ. ಇದರ ಫಲಿತಾಂಶ 10ರಂದು ಹೊರಬೀಳಲಿದೆ.