ನವದೆಹಲಿ: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ರ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.
"ಯಂಗ್ ಇಂಡಿಯಾ ಪ್ರತಿಭೆಗಳಿಂದ ತುಂಬಿದೆ! ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ರ ಗ್ರ್ಯಾಂಡ್ ಫಿನಾಲೆಯು ಈ ಹೊಸತನ ಮತ್ತು ಉತ್ಕೃಷ್ಟತೆಯ ಮನೋಭಾವವನ್ನು ತೋರಿಸುತ್ತದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇಂದು ಸಂಜೆ 4.30ಕ್ಕೆ ಹ್ಯಾಕಥಾನ್‌ನ ಅಂತಿಮ ಸ್ಪರ್ಧಿಗಳೊಂದಿಗೆ ಸಂವಾದ ನಡೆಯಲಿದೆ. "ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆದರ್ಶ ಮತ್ತು ನಾವೀನ್ಯತೆಗಾಗಿ ಒಂದು ರೋಮಾಂಚಕ ವೇದಿಕೆಯಾಗಿ ಹೊರಹೊಮ್ಮಿದೆ. ಈ ಸಮಯದಲ್ಲಿ ನಮ್ಮ ಯುವ ಸಮುದಾಯ ತಮ್ಮ ಆವಿಷ್ಕಾರಗಳಲ್ಲಿ ಕೋವಿಡ್ ನಂತರದ ಪ್ರಪಂಚದತ್ತ ಗಮನ ಹರಿಸುವುದರ ಜೊತೆಗೆ ಆತ್ಮನಿರ್ಭರ ಭಾರತ ರಚಿಸುವ ಮಾರ್ಗಗಳನ್ನು ತೋರಲಿದ್ದಾರೆ" ಎಂದು ಪ್ರಧಾನಿ ಹೇಳಿದರು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ನಿತ್ಯ ಎದುರಾಗುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸುತ್ತದೆ. ಇದು ಉತ್ಪನ್ನ ನಾವೀನ್ಯತೆಯ ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮನೋಭಾವ ಬೆಳೆಸುತ್ತದೆ ಎಂದು ಸರ್ಕಾರ ಹೇಳಿದೆ.
"ಯುವ ಮನಸ್ಸಿನಲ್ಲಿ ಹೊರಗಿನ ಚಿಂತನೆಯನ್ನು ಉತ್ತೇಜಿಸುವಲ್ಲಿ ಇದು ಅತ್ಯಂತ ಯಶಸ್ವಿಯಾಗಿದೆ" ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017ರ ಮೊದಲ ಆವೃತ್ತಿಯಲ್ಲಿ 42,000 ವಿದ್ಯಾರ್ಥಿಗಳ ಭಾಗವಹಿಸಿದ್ದರು. 2018 ಲ್ಲಿ 1 ಲಕ್ಷ ಮತ್ತು 2019ರಲ್ಲಿ 2 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ರ ಮೊದಲ ಸುತ್ತಿನಲ್ಲಿ 4.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 37 ಕೇಂದ್ರ ಸರ್ಕಾರಿ ಇಲಾಖೆಗಳು, 17 ರಾಜ್ಯ ಸರ್ಕಾರಗಳು ಮತ್ತು 20 ಕೈಗಾರಿಕೆಗಳಿಂದ 243 ಸಮಸ್ಯೆಗಳನ್ನು ಪರಿಹರಿಸಲು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.