ನವದೆಹಲಿ:ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ 2020ರಲ್ಲಿ ಭಾಗಿಯಾಗಿ ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳು ಮತ್ತು ಸಂಶೋಧಕರನ್ನುದ್ದೇಶಿಸಿ ಮಾತನಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಪ್ರಮುಖ ಆದ್ಯತೆ ಕುರಿತು ಚರ್ಚಿಸಲು ಆಯೋಜನೆ ಮಾಡಲಾಗಿರುವ ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ ಇದಾಗಿದ್ದು, ನಮೋ ಮಹತ್ವದ ಭಾಷಣ ಮಾಡಲಿದ್ದಾರೆ. ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾ ಕೃಷಿ, ಪೋಷಣೆ, ನೈರ್ಮಲ್ಯ, ತಾಯಿ ಮತ್ತು ಮಕ್ಕಳ ಆರೋಗ್ಯದಿಂದ ಹಿಡಿದು ಸಾಂಕ್ರಾಮಿಕ ರೋಗಗಳವರೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುತ್ತಿದೆ.
ನಾಳೆ ಸಂಜೆ 7:30ಕ್ಕೆ ವಾರ್ಷಿಕ ಸಭೆ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಕಚೇರಿಯಿಂದಲೇ ಅವರು ಮಾತನಾಡಲಿದ್ದಾರೆ. ಕಳೆದ 15 ವರ್ಷಗಳಿಂದ ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿನ ದೊಡ್ಡ ಸವಾಲು ಎದುರಿಸಲು ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ ಆಯೋಜನೆ ಮಾಡಲಾಗುತ್ತಿದೆ.
ಇದರಲ್ಲಿ ವಿವಿಧ ದೇಶದ ನಾಯಕರು, ಪ್ರಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಪ್ರಮುಖವಾಗಿ ಕೊರೊನಾ ತಡೆಗಟ್ಟಲು ಜಾಗತಿಕ ಪರಿಹಾರ ಅಭಿವೃದ್ಧಿ ಸೇರಿ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗುವುದು. 40 ದೇಶಗಳಿಂದ ಸುಮಾರು 1,600 ಜನರು ಭಾಗಿಯಾಗಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್, ಜೈವಿಕ ತಂತ್ರಜ್ಞಾನ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಭಾರತ ಸರ್ಕಾರ,ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.