ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಸಹಭಾಗಿತ್ವ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಹ್ರೇನ್ ರಾಜಕುಮಾರ, ಪ್ರಧಾನಿ ಸಲ್ಮಾನ್ ಬಿನ್ ಹಮದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಬಹ್ರೇನ್ ಪ್ರಧಾನಿಗೆ ಆತ್ಮೀಯ ಧನ್ಯವಾದಗಳು. ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಬಹ್ರೇನ್‌ನ ಪಾಲುದಾರಿಕೆಗೆ ಭಾರತ ಹೆಮ್ಮೆಪಡುತ್ತದೆ. ನಮ್ಮ ದೀರ್ಘಕಾಲದ ನಾಗರಿಕ ಸಂಬಂಧವನ್ನು ಬಲಪಡಿಸಿಕೊಂಡು ಮುಂದುವರೆಸೋಣ ಎಂದು ಪ್ರಧಾನಿ ಕಚೇರಿಯು ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಯನ್ನು ವಿತರಿಸಲು ಸಹಕರಿಸಿದ್ದಕ್ಕಾಗಿ ಬಹ್ರೇನ್ ಪ್ರಧಾನಿ ಹಮದ್, ಪಿಎಂ ಮೋದಿಗೆ ಕೃತಜ್ಞತೆ ಸಲ್ಲಿಸಿದರು.
ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆ ವಿತರಣೆಗೆ ನಮ್ಮೊಂದಿಗೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಭಾರತದ ಸ್ನೇಹಿತರಿಗೆ ಧನ್ಯವಾದಗಳು. ಇದು ಭಾರತದ ಜಾಗತಿಕ ಔದಾರ್ಯತೆ ಮತ್ತು ನಮ್ಮ ಎರಡು ರಾಷ್ಟ್ರಗಳ ನಡುವಿನ ಬಲವಾದ ಸಹಭಾಗಿತ್ವದ ಸಂಕೇತವಾಗಿದೆ ಎಂದು ಬಹ್ರೇನ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಬಾರುಕೋಲು ಚಳವಳಿ : ಕೂಡಲಸಂಗಮ ಶ್ರೀ
ಭಾರತ ಮತ್ತು ಬಹ್ರೇನ್ ಹಿಂದಿನಿಂದಲೂ ನಿಕಟ ಮತ್ತು ಬಹುಮುಖಿ ಸಂಬಂಧ ಹೊಂದಿವೆ. ಉನ್ನತ ಮಟ್ಟದ ರಾಜಕೀಯ ವಿನಿಮಯ, ಸಂವಹನ, ವ್ಯಾಪಾರ ಮತ್ತು ಆರ್ಥಿಕವಾಗಿ ಎರಡೂ ದೇಶಗಳ ನಡುವಿನ ಒಡನಾಟವು ಉತ್ತಮವಾಗಿದೆ. 2019ರ ಆಗಸ್ಟ್ನಲ್ಲಿ ಪ್ರಧಾನಿ ಮೋದಿ ಬಹ್ರೇನ್ ಪ್ರವಾಸ ಕೈಗೊಂಡಿದ್ದರು. ಇದು ಭಾರತದ ಪ್ರಧಾನಿಯೊಬ್ಬರ ಮೊದಲ ಬಹ್ರೇನ್ ಭೇಟಿಯಾಗಿತ್ತು.