ನವದೆಹಲಿ :ಕೃಷಿ ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ತಿದ್ದುಪಡಿಗೆ ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ನಾವು ನೂತನ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದ್ದೇವೆ. ನೂತನಕೃಷಿ ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ತಿದ್ದುಪಡಿ ಮಾಡಲು ಸಿದ್ದ. ಈ ಬಗ್ಗೆ ನಾವು ಸುದೀರ್ಘ ಚರ್ಚೆ ನಡೆಸುತ್ತೇವೆ. ಇಂದಿನ ಪರಿಸ್ಥಿತಿಗೆ ಕೃಷಿ ಕಾನೂನುಗಳ ಬದಲಾವಣೆ ಅವಶ್ಯಕ. ಕೃಷಿ ಕಾನೂನುಗಳ ವಿರುದ್ಧ ಸುಮ್ಮನೆ ವದಂತಿ ಹಬ್ಬಿಸಲಾಗ್ತಿದೆ ಎಂದರು.
ದೇವರ ದಯೆಯಿಂದ ಕೊರೊನಾ ಗೆದ್ದಿದ್ದೇವೆ :ಮನೀಶ್ ತಿವಾರಿ ಹೇಳಿದ್ದಾರೆ. ದೇವರ ದಯೆಯಿಂದ ನಾವು ಕೊರೊನಾ ಗೆದ್ದಿದ್ದೇವೆ ಎಂದು. ಹೌದು. ಖಂಡಿತವಾಗಿಯೂ ನಾವು ದೇವರ ದಯೆಯಿಂದ ಕೊರೊನಾ ಗೆದ್ದಿದ್ದೇವೆ. ಕೊರೊನಾ ಸಮಯದಲ್ಲಿ ವೈದ್ಯರು, ನರ್ಸ್ಗಳು ಆ್ಯಂಬುಲೆನ್ಸ್ ಚಾಲಕರು ಮತ್ತು ಪೌರ ಕಾರ್ಮಿಕರು ನಮ್ಮ ಮುಂದೆ ದೇವರಂತೆ ಬಂದರು.
ನಮ್ಮ ದೇವರು ವಿವಿಧ ರೂಪ ತಾಳಿದ್ದ. ಕೊರೊನಾ ಸೇನಾನಿಗಳು 15 ದಿನ ಮನೆಗೆ ಹೋಗದೆ ಕರ್ತವ್ಯನಿರ್ವಹಿಸಿದರು, ಅವರ ಶ್ರಮದಿಂದ ಮತ್ತು 130 ಕೋಟಿ ಭಾರತೀಯರ ಸಹಕಾರದಿಂದ ನಾವು ಕೊರೊನಾದ ಸಮರವನ್ನು ಗೆದ್ದಿದ್ದೇವೆ ಎಂದರು.
ದೇಶವು 75ನೇ ವರ್ಷದ ಸ್ವಾಂತಂತ್ರ್ಯ ಆಚರಣೆಯ ಹೊತ್ತಿಗೆ ಹೊಸ ಸಂಕಲ್ಪ ಮಾಡಬೇಕಿದೆ. 75 ವರ್ಷದಲ್ಲಿ ನಮ್ಮ ದೇಶ ವಿಶ್ವಕ್ಕೆ ಆಶಾಕಿರಣವಾಗಿದೆ. ಇದಕ್ಕೆಲ್ಲ ಪ್ರಜಾಪ್ರಭುತ್ವದ ಮೌಲ್ಯಗಳು ಅವಕಾಶ ಮಾಡಿಕೊಟ್ಟಿವೆ. ಭಾರತ ಒಂದು ಪವಾಡದ ಪ್ರಜಾಪ್ರಭುತ್ವ ರಾಷ್ಟ್ರ, ಒಂದು ನಿರ್ಧಿಷ್ಟ ಗುರಿಯತ್ತ ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಮಹಿಳಾ ಸಂಸದರ ಬಗ್ಗೆ ಮೆಚ್ಚುಗೆ :ನಮ್ಮ ಮಹಿಳಾ ಸಂದರಿಗೆ ನಾವು ಋಣಿಯಾಗಿದ್ದೇನೆ. ಎಂದಿಗಿಂತ ಈ ಬಾರಿ ಮಹಿಳಾ ಸಂದರು ಹೆಚ್ಚಿನ ಸಂಖ್ಯೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತಕ್ಕೆ ಬಲ ನೀಡಬೇಕು :ಕೊರೊನಾದ ನಂತರ ಹೊಸ ಜಗತ್ತು ಸೃಷ್ಟಿಯಾಗಿದೆ. ಬರೀ ಜನಸಂಖ್ಯೆಯಿಂದ ದೇಶ ಪ್ರಬಲವಾಗಲ್ಲ. ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು, ನಾವೆಲ್ಲ ಆತ್ಮ ನಿರ್ಭರ ಭಾರತಕ್ಕೆ ಬಲ ನೀಡಬೇಕು. ಲೋಕಲ್ ಫಾರ್ ಲೋಕಲ್ ಧ್ವನಿ ಎಲ್ಲೆಡೆ ಕೇಳಿಸುತ್ತಿದೆ. ಆತ್ಮ ನಿರ್ಭರವಾಗುವುದು ರಾಜಕೀಯದಿಂದ ಅಲ್ಲ. ಇದಕ್ಕಾಗಿ ಅಗತ್ಯ ಬದಲಾವಣೆ ಬೇಕು ಎಂದು ಪ್ರಧಾನಿ ಹೇಳಿದರು.