ಅಯೋಧ್ಯಾ (ಉತ್ತರ ಪ್ರದೇಶ):ದಶಕಗಳ ಕನಸಾದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದ್ದು, ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದು, ಈ ಕಾರ್ಯಕ್ರಮದಲ್ಲಿ ಮೋದಿ ಜತೆಗೆ ವಿವಿಧ ಕ್ಷೇತ್ರಗಳ 175 ಮಂದಿ ಗಣ್ಯರು ಭಾಗವಹಿಸಿದ್ದರು.
ಶಿಲಾನ್ಯಾಸಕ್ಕೆ 5 ಇಟ್ಟಿಗೆಗಳನ್ನು ಬಳಕೆ ಮಾಡಲಾಗಿದ್ದು, ಗರ್ಭಗುಡಿ ಸ್ಥಾನದಲ್ಲಿ ಶಿಲಾನ್ಯಾಸಕ್ಕೆ ಇಟ್ಟಿಗೆ ಇಡಲಾಗಿದೆ. ಅಮೃತ ಯೋಗ, ಸಿದ್ಧಯೋಗ, ಭದ್ರ ತಿಥಿ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ.
175 ಅತಿಥಿಗಳ ಪೈಕಿ 135 ಮಂದಿ ಸಂತರು ಇದರಲ್ಲಿ ಪಾಲ್ಗೊಂಡಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್, ಮುಂತಾದವರೆಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿತ್ತು.
ಶಂಕು ಸ್ಥಾಪನೆ ಕಾರ್ಯಕ್ರಮವನ್ನು ವೀಕ್ಷಿಸಲು ಅಯೋಧ್ಯಾ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವುದರಿಂದ ಇಡೀ ಅಯೋಧ್ಯಾ ನಗರದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು.