ನವದೆಹಲಿ: ಇಂದು ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರ 131ನೇ ಜನ್ಮ ದಿನಾಚರಣೆ. ಹಾಗಾಗಿ, ಇದರ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಚಾಚಾ ನೆಹರೂ ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದರು.
'ಇಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ 131ನೇ ಜನ್ಮ ದಿನವಾಗಿದ್ದು, ಅವರಿಗೆ ನನ್ನ ವಿನಮ್ರ ಗೌರವ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೆಹರೂ 1889ರ ನವೆಂಬರ್ 14 ರಂದು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನಿಸಿದರು. 1964ರ ಮೇ.27ರಂದು ಕೊನೆಯುಸಿರೆಳೆದಿದ್ದು, ಇಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದ್ದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ಗೌರವ ಸೂಚಕವಾಗಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ
ನೆಹರೂ ಅವರನ್ನು 'ಚಾಚಾ ನೆಹರು' ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ಮಕ್ಕಳಿಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡುವ ಮಹತ್ವವನ್ನು ಒತ್ತಿ ಹೇಳಿದ್ದರು. ನೆಹರೂ ಅವರ ಮರಣದ ನಂತರ ಅವರ ಜನ್ಮದಿನವನ್ನು 'ಬಾಲ್ ದಿವಸ್' ಅಥವಾ ಮಕ್ಕಳ ದಿನಾಚರಣೆ ಎಂದು ಭಾರತದಲ್ಲಿ ಆಚರಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಅದರಂತೆ ನಂವೆಂಬರ್ 14ರಂದು ಎಲ್ಲೆಡೆ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.