ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಶನಿವಾರ (ನ.28) ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಕೊರೊನಾ ವ್ಯಾಕ್ಸಿನ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಹಮದಾಬಾದ್ನಲ್ಲಿರುವ ಝೈಡಸ್ ಪ್ಲಾಂಟ್ಗೆ ಮೋದಿ ಭೇಟಿ ನೀಡಲಿದ್ದು, ಗುಜರಾತ್‌ನಿಂದ ಕೊರೊನಾ ಲಸಿಕೆ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಝೈಡಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಝೈಕೋವ್-ಡಿ ವ್ಯಾಕ್ಸಿನ್ ಅಂತಿಮ ಹಂತದ ಪರೀಕ್ಷೆ ತಲುಪಿದ್ದು, ಪ್ರಧಾನಿ ಮೋದಿ ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಅದೇ ದಿನ ಹೈದರಾಬಾದ್ಗೆ ಆಗಮಿಸುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆಯ ಪ್ರಗತಿ ಪರಿಶೀಲಿಸಲು ಭಾರತ್ ಬಯೋಟೆಕ್ಗೆ ಭೇಟಿ ನೀಡಲಿದ್ದಾರೆ. ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತ್ ಬಯೋಟೆಕ್ನಲ್ಲಿ ನಡೆಯುತ್ತಿವೆ. ಭೇಟಿ ವೇಳೆ ಲಸಿಕೆಯ ಕೆಲಸದ ವಿವರಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಿಂದಾಗಿ ಮೋದಿಯವರ ಹೈದರಾಬಾದ್ ಭೇಟಿ ಕುತೂಹಲ ಮೂಡಿಸಿದೆ. ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.