ನವದೆಹಲಿ: ಇಡೀ ಪ್ರಪಂಚವನ್ನೇ ಊಹಿಸಲೂ ಸಾಧ್ಯವಾಗಲಾರದಷ್ಟು ಸಂಕಷ್ಟಕ್ಕೆ ದೂಡಿದ ಮಹಾಮಾರಿ ಕೊರೊನಾಗೆ ಭಾರತದಲ್ಲಿ ಲಸಿಕೆಗಳು ಸಿದ್ಧವಾಗಿದ್ದು, ವಿಶ್ವದ ಅತಿದೊಡ್ಡ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ಯಾವಾಗ ಸಿಗುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ದೇಶದಲ್ಲಿ ಲಸಿಕೆ ಲಭ್ಯವಿದ್ದು, ಈ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಸಾಮಾನ್ಯವಾಗಿ, ಲಸಿಕೆ ತಯಾರಿಸಲು ಹಲವು ವರ್ಷಗಳು ಬೇಕಾಗುತ್ತವೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಒಂದಲ್ಲ, ಎರಡು 'ಮೇಡ್ ಇನ್ ಇಂಡಿಯಾ' ಲಸಿಕೆಗಳು ಸಿದ್ಧವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯಾಕ್ಸಿನೇಷನ್ ಡ್ರೈವ್ಗೆ ಪಿಎಂ ಮೋದಿ ಚಾಲನೆ ಪ್ರತಿಯೊಬ್ಬರು ಲಸಿಕೆಯ ಎರಡು ಡೋಸ್ಗಳನ್ನು ಪಡೆಯಬೇಕು. ಎರಡೂ ವ್ಯಾಕ್ಸಿನೇಷನ್‌ಗಳ ನಡುವೆ ಒಂದು ತಿಂಗಳ ಅಂತರವಿರಬೇಕು ಎಂದು ತಜ್ಞರು ಹೇಳಿದ್ದಾರೆ. ಇದನ್ನು ನಾನು ದೇಶದ ಜನರಿಗೆ ನೆನಪಿಸಲು ಬಯಸುತ್ತೇನೆ. ಮೊದಲ ಡೋಸ್ ಪಡೆದ ನಂತರ ಮಾಸ್ಕ್ ತೆಗೆಯುವುದು, ಸಾಮಾಜಿಕ ಅಂತರ ಕಾಯ್ದಿರಿಸಿಕೊಳ್ಳದೇ ಇರುವುದನ್ನು ಮಾಡಬೇಡಿ ಎಂದು ಎಂದು ನಾನು ವಿನಂತಿಸುತ್ತೇನೆ. ಏಕೆಂದರೆ ಎರಡನೇ ಡೋಸ್ ಪಡೆದ ಬಳಿಕವೇ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಧಾನಿ ಎಚ್ಚರಿಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂತಹ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಇತಿಹಾಸದಲ್ಲಿ ಎಂದಿಗೂ ನಡೆಸಲಾಗಿಲ್ಲ. 3 ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ 100ಕ್ಕೂ ಹೆಚ್ಚು ದೇಶಗಳಿವೆ. ಆದರೆ ಭಾರತ ಮೊದಲ ಹಂತದಲ್ಲೇ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ ನಾವು ಈ ಸಂಖ್ಯೆಯನ್ನು 30 ಕೋಟಿಗೆ ಏರಿಕೆ ಮಾಡಬೇಕಿದೆ ಎಂದು ಮೋದಿ ಹೇಳಿದರು.