ನವದೆಹಲಿ: ಉತ್ತರ ಪ್ರದೇಶದ ಆತ್ಮ ನಿರ್ಭರ ರೋಜ್ಗಾರ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದ್ದು, ಲಾಕ್ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡ ಸುಮಾರು 1.25 ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿದೆ.
ಚಾಲನೆ ನೀಡಿದ ಬಳಿಕ ಮಾತನಾಡಿದ ಪಿಎಂ ಮೋದಿ, ಪ್ರಪಂಚದ ಅನೇಕ ದೇಶಗಳಿಗಿಂತಲೂ ಉತ್ತರ ಪ್ರದೇಶ ದೊಡ್ಡದಾಗಿದೆ. ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ರಾಜ್ಯ ಸರ್ಕಾರದ ಕಠಿಣ ಶ್ರಮದಿಂದಾಗಿ ಸುಮಾರು 85,000 ಜನರ ಪ್ರಾಣ ಉಳಿದಿದೆ. ಇಲ್ಲಿನ ವೈದ್ಯರು, ಪೊಲೀಸರು, ಸ್ವಚ್ಛತಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಯೋಗಿ ಸರ್ಕಾರವನ್ನು ಪ್ರಶಂಸಿದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 'ಜಾನ್ ಭಿ ಔರ್ ಜಹಾನ್ ಭಿ' (ಜೀವ-ಜೀವನ ಎರಡೂ ಮುಖ್ಯ) ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಮೋದಿಯವರ 'ಸ್ವಾವಲಂಬಿ ಭಾರತ' ಅಭಿಯಾನದಡಿ ನಾವು ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಆತ್ಮ ನಿರ್ಭರ ರೋಜಗಾರ್ ಯೋಜನೆಯನ್ನು ಆರಂಭಿಸುವ ನಿರ್ಧಾರ ಕೈಗೊಂಡೆವು. ಕೆಲಸ ಕಳೆದುಕೊಂಡ 1.25 ಕೋಟಿ ವಲಸೆ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದಾರೆ. 35 ಲಕ್ಷ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಹಿಂದಿರುಗಿದ್ದು, ಈ ಪೈಕಿ 30 ಲಕ್ಷ ಮಂದಿಯ ಕುಶಲತೆಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ ಎಂದು ಸಿಎಂ ಯೋಗಿ ಇದೇ ವೇಳೆ ಹೇಳಿದರು.